ಚಿತ್ರದುರ್ಗ. ಮಾ.30: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದರೆ, ಉದ್ದಿಮೆ ಪರವಾನಿಗೆ ರದ್ದುಗೊಳಿಸುವುದಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಎಚ್ಚರಿಕೆ ನೀಡಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಬ್ಯಾಂಕರ್, ಆಭರಣ ತಯಾರಕರು, ಮಾರಾಟಗಾರರು, ಹೋಟೆಲ್ ಮತ್ತು ಲಾಡ್ಜ್, ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್, ಬಾರ್ ಅಂಡ್ ರೆಸ್ಟೋರೆಂಟ್, ಪ್ರಿಂಟಿಂಗ್ ಪ್ರೆಸ್‍ಗಳ ಮಾಲೀಕರು ಹಾಗೂ ಈ ಸಂಘಗಳ ಅಧ್ಯಕ್ಷರ ಸಭೆ ನಡೆಸಿ ಅವರು ಮಾತನಾಡಿದರು.
ಚುನಾವಣೆ ಸುಗಮವಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು. ಯಾವುದೇ ಅಕ್ರಮ ವ್ಯವಹಾರಗಳಿಗೆ ಅವಕಾಶ ನೀಡಬಾರದು. ದಾಸ್ತಾನು, ನಗದು ಹಾಗೂ ನೊಂದಣಿ ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಬೇಕು. ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಮುದ್ರಿಸುವ, ಬ್ಯಾನರ್, ಕರಪತ್ರ, ಬಿತ್ತಿಪತ್ರಗಳಲ್ಲಿ ಪ್ರಿಂಟಿಂಗ್ ಪ್ರೆಸ್‍ಗಳ ಹೆಸರು ಹಾಗೂ ಮುದ್ರಣಗೊಂಡ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಗುರುತಿನ ಚೀಟಿಗಳನ್ನು ಪಡೆದು ವ್ಯಕ್ತಿಗಳು ಲಾಡ್ಜ್‍ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು. ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟದ ಮೇಲೆ ಮಿತಿ ಇರಿಸಬೇಕು. ಸಮಯಪಾಲನೆ ಮಾಡಬೇಕು. ಯಾವುದೇ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳೊಂದಿಗೆ ಜೊತೆಗೂಡಿ ಅಕ್ರಮಗಳನ್ನು ಎಸೆಗಬಾರದು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಪೌರಾಯುಕ್ತೆ ಎಂ.ರೇಣುಕಾ, ತಾಪಂ ಇಓ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಅನಂತರಾಜು, ಆರಕ್ಷಕ ನಿರೀಕ್ಷಕ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರು ಇದ್ದರು.
*ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ:* ಚಿತ್ರದುರ್ಗ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಂ.ಕಾರ್ತಿಕ್ ಅವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿದ್ದ ಎಲ್ಲಾ ಸದಸ್ಯರಿಗೆ ತಿಳಿಸಿ, ಚುನಾವಣಾ ಮಾರ್ಗಸೂಚಿಯನ್ವಯ ಸಹಕರಿಸಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.