ಧಾರವಾಡ: ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಮತ್ತೆ ನಿರಾಕರಣೆ ಮಾಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿ, ಧಾರವಾಡ ಜಿಲ್ಲೆಯ ಪ್ರವೇಶ ಮಾಡಿದ್ದರು. ಆದರೆ ಈ ಬಾರಿ ಕೋರ್ಟ್ ಅನುಮತಿ ನೀಡಿಲ್ಲ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಪ್ರವೇಶ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಸಾಕ್ಷ್ಯ ನಾಶ ಮಾಡಬಹುದು ಎಂಬ ಕಾರಣದಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರವೇಶವನ್ನು ನಿರಾಕರಿಸಿದೆ.
2016ರ ಜೂನ್ 15ರಂದು ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ 2020ರಲ್ಲಿ ವಿನಯ್ ಕುಲಕರ್ಣಿ ಬಂಧನ ಕೂಡ ಆಗಿತ್ತು. ಒಂಭತ್ತು ತಿಂಗಳುಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದು ಬಳಿಕ ಹೊರಗೆ ಬಂದಿದ್ದರು. ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ತನಿಖೆ ನಡೆಸುತ್ತಿದೆ. ಈ ಸಂಬಂಧ ಈಗಾಗಲೇ 21 ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸದ್ಯ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಷರತ್ತು ಮೀರಿ ಧಾರವಾಡಕ್ಕೆ ಪ್ರವೇಶ ಮಾಡಿದರೆ ಜಾಮೀನು ರದ್ದು ಪಡಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಗೆಲುವು ಕಂಡಿದ್ದಾರೆ. ಆದರೂ ಧಾರವಾಡಕ್ಕೆ ಪ್ರವೇಶಿಸುವಂತೆ ಇಲ್ಲ.