ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 14 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಐದನೆ ದಿನದ ಮುಷ್ಕರದಲ್ಲಿ ಪುಲ್ವಾಮ ದಾಳಿಯಲ್ಲಿ ಮೃತರಾದ ನಲವತ್ತು ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಶುಕ್ರವಾರ ಮೌನ ಆಚರಿಸಲಾಯಿತು.
ಪುಲ್ವಾಮ ದಾಳಿಯಲ್ಲಿ ನಲವತ್ತು ಯೋಧರು ಬಲಿಯಾಗಿ ಆರು ವರ್ಷಗಳಾಗಿದ್ದು, ಗೌರವಾರ್ಥವಾಗಿ ಮೌನ ಆಚರಿಸಿದ ಗ್ರಾಮ ಆಡಳಿತಾಧಿಕಾರಿಗಳು ನಮ್ಮ ಬೇಡಿಕೆಗಳು ಈಡೇರುವತನಕ ಮುಷ್ಕರವನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ, ಆಲ್ಮೆರಾ, ಮೊಬೈಲ್ ಫೋನ್, ಸಿಯುಜಿ. ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್/ ಲ್ಯಾಪ್‍ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ನೀಡಬೇಕು. ವಿಶೇಷ ಚೇತನರು, ಆರೋಗ್ಯದ ಸಮಸ್ಯೆಯಿರುವ ಪ್ರಕರಣಗಳು ಹಾಗೂ ಮಾಜಿ ಸೈನಿಕರ ನಿಯೋಜನೆಗಳು ಕೌನ್ಸಿಲಿಂಗ್ ಮೂಲಕ ಆಗಬೇಕು. ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ: 329/23 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮಾಡಿರುವ ವೃಂದ ಮತ್ತು ನೇಮಕಾತಿ ತಿದ್ದುಪಡಿ ಯಥಾವತ್ತಾಗಿರಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಪಿ.ಎಸ್.ಆರ್.ನಿಯಮ 16 ಎ ರ ಉಪಖಂಡ(2) ನ್ನು ಮರು ಸ್ಥಾಪಿಸಬೇಕು.
ಕಂದಾಯ ಇಲಾಖೆ ಹಾಗೂ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿಯಾಗಬೇಕು. ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಇತರೆ ದಾಖಲೆಗಳಿಲ್ಲದೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನಕ್ಕೆ ಚಾಲನೆ ನೀಡುತ್ತಿರುವುದನ್ನು ಕೈಬಿಡುವಂತೆ ಪ್ರತಿಭಟನಾನಿರತರು ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಪಿ.ಸಂಪತ್‍ಕುಮಾರ್, ಗೌರವಾಧ್ಯಕ್ಷ ಎನ್.ಎಸ್.ಈಶ್ವರಪ್ಪ, ಉಪಾಧ್ಯಕ್ಷರುಗಳಾದ ಪಾಂಡುರಂಗಪ್ಪ, ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ವಡೇರ್, ಖಜಾಂಚಿ ಜಿ.ಎಸ್.ಸುರೇಶ್, ಎನ್.ಜೆ.ತಾಯಕ್ಕ, ಪ್ರಿಯಾ ಬಿ.ಆರ್. ಶ್ರೀದೇವಿ, ಎಲ್.ಅಣ್ಣೇಶ್, ಸುಂದರ್‍ರಾಜ್‍ನಾಯ್ಕ, ಎನ್.ಬಸವನಗೌಡ, ಎಲ್.ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

















