ಚೆನ್ನೈನಲ್ಲಿ ನಟ ವಿಜಯ್ ಅವರು ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪ್ರಮಾಣವಚನದ ಸಮಯ ಮತ್ತು ಸರ್ಕಾರದ ಭವಿಷ್ಯದ ಬಗ್ಗೆ ಇದೀಗ ರಾಜಕೀಯ ಹಾಗೂ ಜ್ಯೋತಿಷ್ಯ ವಲಯಗಳಲ್ಲಿ ಚರ್ಚೆಗಳು ಜೋರಾಗಿವೆ.ಮೊದಲಿನಿಂದಲೇ ಮಧ್ಯಾಹ್ನ ಕಾರ್ಯಕ್ರಮ ನಡೆಸುವ ಯೋಜನೆ ಇದ್ದರೂ, ಜ್ಯೋತಿಷಿಗಳ ಸಲಹೆ ಮೇರೆಗೆ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಪಡಿಸಲಾಯಿತು ಎನ್ನಲಾಗಿದೆ. ಬೆಳಿಗ್ಗೆ 10.45ರವರೆಗೆ ಶುಭ ಸಮಯವಿದೆ ಎಂಬ ಲೆಕ್ಕಾಚಾರದ ಆಧಾರದಲ್ಲಿ ಪ್ರಮಾಣವಚನ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನೀಡಿರುವ ಪ್ರಕಾಶ್ ಅಮ್ಮಣ್ಣಾಯ, ಸರ್ಕಾರದ ಭವಿಷ್ಯ ಸ್ಥಿರವಾಗಿರುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಆರು ತಿಂಗಳಿಂದ ಒಂದು ವರ್ಷದೊಳಗೆ ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ವಿಜಯ್ ಅವರಿಗೆ ಅಧಿಕಾರದಲ್ಲಿ ಹಲವು ಸವಾಲುಗಳು ಎದುರಾಗಬಹುದು” ಎಂದು ಅವರು ಹೇಳಿದ್ದಾರೆ.ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಲಗ್ನ, ಗುರುದೃಷ್ಟಿ ಹಾಗೂ ಬಾಧಕ ಸ್ಥಿತಿಗಳ ಕುರಿತು ಉಲ್ಲೇಖಿಸಿರುವ ಅವರು, ಸರ್ಕಾರಕ್ಕೆ ರಾಜಕೀಯ ಒತ್ತಡಗಳು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ್ದಾರೆ.

ಇನ್ನೊಂದೆಡೆ, ವಿಜಯ್ ನೇತೃತ್ವದ ಸರ್ಕಾರ ಮೈತ್ರಿ ಬೆಂಬಲದ ಮೇಲೆ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಪಕ್ಷಕ್ಕೆ ಗಮನಾರ್ಹ ಗೆಲುವು ಸಿಕ್ಕಿದ್ದರೂ, ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದ ಪೂರ್ಣ ಬಹುಮತ ಲಭಿಸಿರಲಿಲ್ಲ. ಹೀಗಾಗಿ ಇತರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲಾಗಿದೆ.ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


















