ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆದಿದ್ದು, ಹಿರಿಯರು, ಕಿರಿಯರು ಎಲ್ಲರು ಶುಭ ಹಾರೈಸಿದ್ದಾರೆ. ಈ ವೇಳೆ ಬಿವೈ ವಿಜಯೇಂದ್ರ ಅವರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದೆ ವೇಳೆ ಹೈಕಮಾಂಡ್ ನಾಯಕರಿಗೂ ಧನ್ಯವಾದ ತಿಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು, ಪ್ರಧಾನಿ ಮೋದಿ ಅವರು, ಕೇಂದ್ರ ಗೃಹ ಸಚುವರಾದ ಅಮಿತ್ ಶಾ ಅವರು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಜೀ ಅವರ ಆಶಯದಂತೆ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದಿದ್ದೇನೆ. ನಮ್ಮ ಪಕ್ಷದ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ನಾನು ಬಂದು ಇಲ್ಲಿ ಮಾತನಾಡುತ್ತಿದ್ದೇನೆ ಅಂದರೆ ನನ್ನನ್ನು ಶಾಸಕನಾಗಿ ಮಾಡಿರುವ ಶಿಕಾರಿಪುರ ಹಿರಿಯರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಹಿರಿಯರ ಜೊತೆಗೂ ಮಾತನಾಡಿ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಅವರೆಲ್ಲರೂ ವಿಜಯೇಂದ್ರ ನೀನು ಮುಂದೆ ನುಗ್ಗು. 28ಕ್ಕೆ 28 ಸ್ಥಾನ ಗಳಿಸಲು ಮುಂದೆ ಹೋಗೋಣಾ ಎಂದಿದ್ದಾರೆ. ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ತಂದೆ ಯಡಿಯೂರಪ್ಪನವರು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂದರೆ ಹಾಸ್ಯ ಮಾಡುತ್ತಿದ್ದರು. ಬಳಿಕ ಆಗಿದ್ದು 25 ಸಂಸದರ ಗೆಲುವು. ನಾನು ಯಡಿಯೂರಪ್ಪ ಅವರ ಹೋರಾಟವನ್ನು ನೋಡಿದ್ದೇನೆ. ಯಾರೂ ಕೂಡ ತಲೆ ಬಗ್ಗಿಸಿಕೊಂಡು ಹೋಗುವಂತೆ ಮಾಡುವುದಿಲ್ಲ. ನಿಮ್ಮ ಜೊತೆಗೆ ನಾನು ಇರುತ್ತೇನೆ ಎಂದು ಮೊದಲ ಸುದ್ದಿಗೋಷ್ಟಿಯಲ್ಲಿ ಎಲ್ಲರಿಗೂ ಭರವಸೆ ನೀಡಿದ್ದಾರೆ.