ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ನಗರದ ಮಧ್ಯ ಭಾಗದಲ್ಲಿರುವ ನ್ಯಾಯಾಲಯದ ಆವರಣದಲ್ಲಿಯೇ ನ್ಯಾಯಾಲಯಗಳ ಸಂಕೀರ್ಣವನ್ನು ಶೀಘ್ರದಲ್ಲಿಯೇ ನಿರ್ಮಾಣ ಮಾಡುವಂತೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ವಿಜಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಕಲಾ ಕಾಲೇಜು ಹಿಂಭಾಗ ಯಂಗಮ್ಮನಕಟ್ಟೆಯ ಹತ್ತಿರವಿರುವ ಗುಡ್ಡಗಾಡು ಪ್ರದೇಶದಲ್ಲಿ ನ್ಯಾಯಾಲಯಗಳ ಸಂಕೀರ್ಣ ಮಾಡುವುದರಿಂದ ಬಡ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಪೊಲೀಸ್ ಪೆರೇಡ್ ಮೈದಾನವನ್ನಾದರೂ ಬಳಸಿಕೊಳ್ಳಿ ಎಂದು ಮನವಿ ಮಾಡಿದರು.
ಹತ್ತು ನ್ಯಾಯಾಲಯಗಳಿವೆ. ಕೊಠಡಿಗಳು ಕಿಷ್ಕಿಂದೆಯಾಗಿರುವುದರಿಂದ ವಕೀಲರು ಕೂರಲು ಜಾಗವಿಲ್ಲದಂತಾಗಿದೆ. ಆಧುನಿಕ ನ್ಯಾಯಾಂಗ ಸಂಕೀರ್ಣವಾಗಬೇಕು. ಇದರಿಂದ ಕಕ್ಷಿದಾರರು ಹಾಗೂ ವಕೀಲರುಗಳಿಗೆ ಅನುಕೂಲವಾಗಲಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಏಕಾಂಗಿಯಾಗಿಯಾದರೂ ಹೋರಾಟ ಮಾಡುತ್ತೇನೆಂದು ಕೆ.ಎಸ್.ವಿಜಯ ಎಚ್ಚರಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ 25 ಚುನಾಯಿತರು ಹಾಗೂ ಒಬ್ಬ ನಾಮ ನಿರ್ದೇಶಿತರು ನೇಮಕವಾಗುವುದರಿಂದ ಜಿಲ್ಲಾವಾರು ಅಥವಾ ವಕೀಲರ ಸಂಖ್ಯೆಯನ್ನು ಆಧರಿಸಿ ಎರಡು ಜಿಲ್ಲೆಗೊಂದರಂತೆ ಕ್ಷೇತ್ರಗಳನ್ನಾಗಿ ವಿಂಗಡಿಸಿ ಪ್ರತಿನಿಧಿಸಲು ತಿದ್ದುಪಡಿ ತರುವಂತೆ ರಾಜ್ಯ ವಕೀಲರ ಪರಿಷತ್‍ನ ಗಮನ ಸೆಳೆದರು.
ವಕೀಲರುಗಳಾದ ಮಾಲತೇಶ್ ಅರಸ್, ಸಚಿನ್‍ಬಾಬು, ಮಲ್ಲಿಕಾರ್ಜುನ, ವಂದನ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




