ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಮಾ. 14) : ಸರ್ಕಾರದ ವಿದ್ಯಾನಿಧಿ ಯೋಜನೆಯಡಿ ಆಟೋರಿಕ್ಷಾ, ಮೋಟಾರು ಕ್ಯಾಬ್ ಚಾಲಕರ ಮಕ್ಕಳಿಗೂ ತಮ್ಮ ವ್ಯಾಸಂಗಕ್ಕೆ ಅನುಕೂಲವಾಗುವಂತಾಗಲು ವಾರ್ಷಿಕ ಸ್ಕಾಲರ್‌ಶಿಪ್ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಆಟೋರಿಕ್ಷಾ ಚಾಲಕರು, ಹಳದಿ ಬೋರ್ಡ್ ಮೋಟಾರು ಕ್ಯಾಬ್ ಚಾಲಕರ ಮಕ್ಕಳು ಉನ್ನತ ವಿಧ್ಯಾಭ್ಯಾಸ ಕೈಗೊಳ್ಳುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯಡಿ ವಾರ್ಷಿಕ ಶಿಷ್ಯವೇತನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಪಿಯುಸಿ, ಐಟಿಐ, ಡಿಪ್ಲೋಮಾ ಮುಂತಾದ ಪದವಿಗೂ ಮುನ್ನ ಪಡೆಯುವ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ರೂ. 2500 ಹಾಗೂ ವಿದ್ಯಾರ್ಥಿನಿಯರಿಗೆ ರೂ. 3000. ಬಿಎ, ಬಿಎಸ್‍ಸಿ, ಬಿಕಾಂ ಮುಂತಾದ ಪದವಿ ವ್ಯಾಸಂಗ ಮಾಡುವ (ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ರೂ. 5000, ವಿದ್ಯಾರ್ಥಿನಿಯರಿಗೆ ರೂ. 5500. ಎಲ್.ಎಲ್.ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸರಿ ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ. 7500, ವಿದ್ಯಾರ್ಥಿನಿಯರಿಗೆ ರೂ. 8000. ಎಂ.ಬಿ.ಬಿ.ಎಸ್., ಬಿ.ಇ., ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ. 10,000, ವಿದ್ಯಾರ್ಥಿನಿಯರಿಗೆ ರೂ. 11,000 ಗಳ ವಾರ್ಷಿಕ ಶಿಷ್ಯ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಚಾಲಕರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ರಾಜ್ಯದ ಯಾವುದೇ ಪ್ರಾದೇಶಿಕ ಅಥವಾ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಮೋಟಾರು ಕ್ಯಾಬ್, ಆಟೋರಿಕ್ಷಾ ಕ್ಯಾಬ್ ವರ್ಗಗಳ ಸಾರಿಗೆ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರ ಹೊಂದಿರುವ ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಆಟೋರಿಕ್ಷ”ಆ ಚಾಲಕರಾಗಿರಬೇಕು. ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿ.ವಿ. ಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶ ಪಡೆದಿರಬೇಕು.
ಈ ಅರ್ಹತೆ ಹೊಂದಿರುವವರು ಹೆಚ್ಚಿನ ಮಾಹಿತಿಗೆ ಹಾಗೂ ದಾಖಲಿಸಲು https://sevasindhu.karnataka.gov.in/sevasindhu/kannada ಪೋರ್ಟಲ್‍ನಿಂದ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.