ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ನ.24): ರಾಜ್ಯ ಸರ್ಕಾರ ಹದಿನೇಳು ಲಕ್ಷ ಎಕರೆ ಸರ್ಕಾರಿ ಜಮೀನನ್ನು ಟ್ರಸ್ಟ್ ಇನ್ನಿತರೆ ಸಂಘ ಸಂಸ್ಥೆಗಳಿಗೆ ನೀಡಲು ಹೊರಟಿರುವುದನ್ನು ವಿರೋಧಿಸಿ 2023 ಫೆ.22 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಕಮ್ಯನಿಸ್ಟ್ ಪಕ್ಷ ರಾಜ್ಯ ಕಾರ್ಯದರ್ಶಿ ಕಾಂ.ಸಾತಿ ಸುಂದರೇಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅಂದಾಜು ಐವತ್ತು ಲಕ್ಷ ಕುಟುಂಬಗಳು ವಸತಿ ಹೀನವಾಗಿವೆ. 4 ಎಕರೆ 30 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ರೈತರಿಗೆ ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ನೀಡಬೇಕು. ರಾಜ್ಯದಲ್ಲಿರುವ ವಸತಿ ಹೀನರಿಗೆ ಐದು ಲಕ್ಷ ಎಕರೆ ಜಮೀನಿಗಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ನಿರ್ಲಕ್ಷೆ ವಹಿಸುತ್ತಿರುವ ರಾಜ್ಯ ಸರ್ಕಾರ ಬಂಡವಾಳ ಶಾಹಿ, ಉದ್ಯಮಿಗಳು, ಕಾರ್ಪೊರೇಟರ್‍ಗಳಿಗೆ ಸಾವಿರಾರು ಎಕರೆ ಜಮೀನು ನೀಡಲು ಮುಂದಾಗಿರುವುದನ್ನು ವಿರೋಧಿಸಿ ವಿಧಾನಸೌಧ ಚಲೋಗೆ ಮುಂದಾಗಿದ್ದೇವೆಂದು ಹೇಳಿದರು.
ಭಾರತ ಕಮ್ಯನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಇಂಗಳದಾಳ್ ಕಾಪರ್‍ಮೈನ್ಸ್‍ನಲ್ಲಿ ಇನ್ನು ನೂರು ವರ್ಷಗಳ ಕಾಲ ತೆಗೆಯುವಷ್ಟು ಕಾಪರ್ ಹಾಗೂ ಚಿನ್ನವಿದೆ. ಮತ್ತೆ ಆರಂಭಿಸಿದರೆ ಸಾವಿರಾರು ಕಾರ್ಮಿಕರಿಗೆ ಕೆಲಸ ನೀಡಿದಂತಾಗುತ್ತದೆ. ಹಟ್ಟಿ ಗೋಲ್ಡ್ ಮೈನ್ಸ್‍ನ್ನು ರಾಜ್ಯ ಸರ್ಕಾರ ಖಾಸಗಿಕರಣಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ತನ್ನ ವಶದಲ್ಲಿಟ್ಟುಕೊಂಡು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಭಾರತ ಕಮ್ಯನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಸದಸ್ಯ ಕಾಂ.ಬಿ.ರಾಜಪ್ಪ, ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡುಳ್ಳಾರ್ತಿ ಕರಿಯಣ್ಣ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.