* ಕೆಳಗೋಟೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
* ಜೋಗಿಮಟ್ಟಿ ರಸ್ತೆಯ ರುದ್ರ ಭೂಮಿಯಲ್ಲಿ ನಾಳೆ (ಮೇ. 10) ಅಂತ್ಯಕ್ರಿಯೆ
ಚಿತ್ರದುರ್ಗ, (ಮೇ.09): ಹಿರಿಯ ಪತ್ರಕರ್ತ ಪ್ರತಾಪ್ ರುದ್ರದೇವ (52) ಮಂಗಳವಾರ ಸಂಜೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾದರು.
ಬಹಳ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಗರದ ಜೋಗಿಮಟ್ಟಿ ರಸ್ತೆ, ಜಟ್‌ಪಟ್ ನಗರ ಮುಂಭಾಗದ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಪತ್ನಿ, ಪುತ್ರ, ಪುತ್ರಿ ಹಾಗೂ ತಂದೆ, ಹಿರಿಯ ಪತ್ರಕರ್ತ ಚಂದ್ರವಳ್ಳಿ ತಿಪ್ಪೇರುದ್ರಸ್ವಾಮಿ ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಎಬಿವಿಪಿ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಘ-ಪರಿವಾರದಲ್ಲಿ ಸೇವೆ ಸಲ್ಲಿಸಿದ್ದ ಪ್ರತಾಪ್ ರುದ್ರದೇವ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತರರಾಗಿ ಸೇವೆ ಸಲ್ಲಿಸಿದ್ದರು.
ಟಿ.ರವಿಕುಮಾರ್, ಅರವಿಂದ್ ಲಿಂಬಾವಳಿ ಸೇರಿ ಅನೇಕರೊಂದಿಗೆ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರತಾಪ್ ರುದ್ರದೇವ್, ಜಿಲ್ಲೆಯ ವಿವಿಧ ಜನಪರ ಸಂಘಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಅಂತಿಮ ದರ್ಶನ: ನಗರದ ಕೆಳಗೋಟೆ ಸಮೀಪದ ಸರಸ್ವತಿ ಕಾನೂನು ಕಾಲೇಜು ಬಳಿಯ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂತಾಪ: ಪ್ರತಾಪ್ ರುದ್ರದೇವ್ ನಿಧನಕ್ಕೆ ಜಿಲ್ಲೆಯ ಅನೇಕ ಮಠಾಧೀಶರು, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಯ ಸಂಘದ ಪದಾಧಿಕಾರಿಗಳು, ಪತ್ರಕರ್ತರು, ಬಿಜೆಪಿ-ಕಾಂಗ್ರೆಸ್ -ಜೆಡಿಎಸ್ ಮುಖಂಡರು , ಅನೇಕ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.