ಹಿರಿಯ ನಟ ಶರತ್ ಬಾಬು ನಿಧನರಾಗಿದ್ದಾರೆ.
ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಇಂದು ಕೊನೆಯುಸಿರೆಳೆದಿದ್ದಾರೆ.
ಶರತ್ ಬಾಬು ಎಐಜಿ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಗ್ಗೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ ಶರತ್ ಬಾಬು ಅವರು ಸೆಪ್ಸಿಸ್ ನಿಂದ ಸಾವನ್ನಪ್ಪಿದ್ದಾರೆ ಮತ್ತು ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಯಕೃತ್ತು ಸೇರಿದಂತೆ ಇತರ ಅಂಗಗಳು ಹಾನಿಗೊಳಗಾಗಿವೆ. ಶರತ್ ಬಾಬು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ಸ್ಥಳಾಂತರಿಸಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ.
ಶರತ್ ಬಾಬು ಜುಲೈ 31, 1951 ರಂದು ವಿಜಯಶಂಕರ ದೀಕ್ಷಿತುಲು ಮತ್ತು ಸುಶೀಲಾ ದೇವಿ ದಂಪತಿಗೆ ಜನಿಸಿದರು. ಶರತ್ ಬಾಬು ಅವರ ನಿಜವಾದ ಹೆಸರು ಸತ್ಯಂಬಾಬು ದೀಕ್ಷಿತುಲು. ಅವರನ್ನು ಸತ್ಯನಾರಾಯಣ ದೀಕ್ಷಿತ ಎಂದೂ ಕೆಲವರು ಕರೆಯುತ್ತಿದ್ದರು.
ಕನ್ನಡ ಚಿತ್ರರಂಗದಲ್ಲಿಯೂ ಕೂಡಾ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಅಮೃತವರ್ಷಿಣಿ ಚಿತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.