ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 14 : ಜಿಲ್ಲೆಯ ಹೊಳಲ್ಕೆರೆ ಮೂಲದ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (76 ವರ್ಷ) (Bank Janardhan) ನಿಧನ ಹೊಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾತ್ರಿ 2.30ರ ಸುಮಾರಿಗೆ ಕೊನೆಯುಸಿರೆಳೆದರು ಸುಲ್ತಾನ್ ಪಾಳ್ಯದ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.

ಹೊಳಲ್ಕೆರೆಯಲ್ಲಿ 1949ರಲ್ಲಿ ಜನಿಸಿದರು. ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್ ಆಪರೇಟರ್ ಆಗಿ ಕೆಲಸ ನಿರ್ವಹಿಸಿದರು. ಜೊತೆಗೆ ನಾಟಕಗಳಲ್ಲಿಯೂ ಬಣ್ಣ ಹಚ್ಚಿ ನಟಿಸುತ್ತಿದ್ದರು. ಒಮ್ಮೆ ಹೊಳಲ್ಕೆರೆಗೆ ಬಂದಿದ್ದ ಧೀರೇಂದ್ರ ಗೋಪಾಲ್ ಅವರು ಇವರ ನಾಟಕಗಳನ್ನು ನೋಡಿ ಬೆಂಗಳೂರಿಗೆ ಬರುವಂತೆ ಚಲನಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದರು. ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದು ಧೀರೇಂದ್ರ ಗೋಪಾಲ್ ಅವರನ್ನು ಭೇಟಿ ಮಾಡಿದರು. ನಂತರದ ದಿನಗಳಲ್ಲಿ ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಅವರಿಗೆ ಬಾಡಿಗಾರ್ಡ್ ಪಾತ್ರ ಮಾಡಿದರು.

1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿ ಚಿತ್ರರಂಗದಲ್ಲಿ ಉತ್ತುಂಗಕ್ಕೇರಿದರು. ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

