ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ತುರುವನೂರು ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ವಿಜಯದಶಮಿಯಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣರವರು ಅಂಬು ಕತ್ತರಿಸುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.
ಜರಿ ವಸ್ತ್ರ, ತಲೆಗೆ ಪೇಟ ಧರಿಸಿ ಮಧುಮಗನಂತೆ ಸಿಂಗಾರಗೊಂರು ಕೈಯಲ್ಲಿ ಕತ್ತಿ ಹಿಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣರವರು ಅಂಬು ಕತ್ತರಿಸುವ ಮುನ್ನ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿದ ನಂತರ ಸಕಲ ವಾದ್ಯಗಳೊಂದಿಗೆ ಅಂಬು ಕತ್ತರಿಸಲು ಕರೆದುಕೊಯ್ಯಲಾಯಿತು.
ಅಂಬು ಚೇದನಕ್ಕೂ ಮುನ್ನ ಪೂಜೆ ಸಲ್ಲಿಸಿದ ತಹಶೀಲ್ದಾರ್ ಅಂಬು ಕತ್ತರಿಸಿದ ಕೂಡಲೆ ಸುತ್ತಲು ನೆರೆದಿದ್ದ ನೂರಾರು ಭಕ್ತರು ಬಾಳೆ ದಿಂಡಿನಲ್ಲಿದ್ದ ಚಿಕ್ಕ ಚಿಕ್ಕ ಬಾಳೆಕಾಯಿ ಹಾಗೂ ಬಾಳೆ ಎಲೆಗೆ ಮುಗಿಬಿದ್ದರು.
ತಿಪ್ಪಿನಘಟ್ಟಮ್ಮ, ವೆಂಕಟರಮಣಸ್ವಾಮಿ, ಕೊಲ್ಲಾಪುರದ ಮಹಾಲಕ್ಷ್ಮಿ ಸೇರಿದಂತೆ ಅನೇಕ ದೇವರುಗಳು ವಿಶೇಷ ಅಲಂಕಾರದೊಂದಿಗೆ ಮೆರವಣಿಗೆ ಮೂಲಕ ವಿಜಯದಶಮಿಗೆ ಆಗಮಿಸಿದ್ದವು. ನಂತರ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿಯನ್ನು ಸಡಗರದಿಂದ ಆಚರಿಸಿದರು.
ಚಿತ್ರದುರ್ಗ: ದಸರಾ ಹಬ್ಬದ ವಿಜಯದಶಮಿಯಂದು ತುರುವನೂರು ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಬೆಳ್ಳಿ ಬಂಗಾರದ ಆಭರಣ ಹಾಗೂ ಬೃಹಧಾಕಾರವಾದ ಬಗೆ ಬಗೆಯ ಹೂವಿನ ಹಾರಗಳಿಂದ ಸಿಂಗಾರಗೊಂಡಿದ್ದ ವೆಂಕಟರಮಣಸ್ವಾಮಿಯನ್ನು ಬೆಳಗಿನಿಂದ ಸಂಜೆಯತನಕ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ದೇವಸ್ಥಾನದ ಆವರಣದಲ್ಲೆಲ್ಲಾ ಜಮಾಯಿಸಿದ್ದ ಸಹಸ್ರಾರು ಭಕ್ತರು ಮೆರವಣಿಗೆ ಮೂಲಕ ಬರುತ್ತಿದ್ದ ವಿವಿಧ ದೇವರುಗಳಿಗೆ ಭಕ್ತಿ ಸಮರ್ಪಿಸುತ್ತಿದ್ದರು. ದೇವಸ್ಥಾನದ ಮುಂಭಾಗ ರಸ್ತೆಯ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಆಟೋಗಳು ಸಾಲುಗಟ್ಟಿ ನಿಂತಿದ್ದರಿಂದ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ದಿನವಿಡಿ ಹರಸಾಹಸ ಪಡುವಂತಾಗಿತ್ತು.