ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜನವರಿ. 22 : ಹಳ್ಳಿಯ ಮಕ್ಕಳಲ್ಲಿ ಅಪಾರವಾದ ಬುದ್ಧಿವಂತಿಕೆ ಇರುತ್ತದೆ. ಅದಕ್ಕೆ ತಕ್ಕ ಬೆಂಬಲ ಸಿಕ್ಕರೆ ಜಾಗತಿಕವಾಗಿ ಸಾಧನೆ ಮಾಡಬಲ್ಲರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ತಾಲೂಕಿನ ಸಾಣಿಕೆರೆ ಸಮೀಪದ ವೇದ ಸಮೂಹ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಅಂಕಗಳು, ಪರೀಕ್ಷೆಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಯುವಕರಿಗೆ ಉತ್ತಮ ಅವಕಾಶ ಕಲ್ಪಿಸುವ ಅಂಶಗಳು ನೀತಿಯಲ್ಲಿವೆ. ಹತ್ತು ವರ್ಷಗಳಲ್ಲಿ ರವೀಂದ್ರ ಹಾಗೂ ಅವರ ತಂಡ ಶ್ರಮವಹಿಸಿದ ಪ್ರತಿಫಲವಾಗಿ ವೇದ ಸಮೂಹ ಶಿಕ್ಷಣ ಸಂಸ್ಥೆ ಇಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದರು. ಅಂಕ ಗಳಿಸುವುದೇ ಶಿಕ್ಷಣ ಅಲ್ಲ, ಮಕ್ಕಳಲ್ಲಿ ಸಂಸ್ಕಾರ, ಮಾನವೀಯತೆ ಜೊತೆಗೆ ಭವಿಷ್ಯ ರೂಪಿಸುವುದೇ ನಿಜವಾದ ಶಿಕ್ಷಣ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದೆ. ಅದರ ಪ್ರತಿಫಲದಿಂದ
ಲಕ್ಷಾಂತರ ಹೆಣ್ಣು ಮಕ್ಕಳ ಬದುಕು ಹಾಸನಾಗಿದೆ.
ವೇದ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಿ. ಟಿ ರವೀಂದ್ರ ಅವರು ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಊಹೆ ಮಾಡದ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ಸಣ್ಣದಾಗಿ ಆರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿರುವುದು ಖುಷಿಯ ಸಂಗತಿ. ಬಯಲುಸೀಮೆಯ ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ಲಾಘನೀಯ ಎಂದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ವೇದ ಶಿಕ್ಷಣ ಸಮೂಹ ಸಂಸ್ಥೆ ಸಾವಿರಾರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಕಡಿಮೆ ಸಮಯದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಹೊರಹೊಮ್ಮಿದೆ. ರವೀಂದ್ರ ಅವರು ಸಂಸ್ಥೆಗೆ ವೇದ ಎಂದು ಹೆಸರಿಡುವ ಮೂಲಕ ಜ್ಞಾನದ ಸಂಪತ್ತನ್ನು ಹಂಚುವ ಕೆಲಸದಲ್ಲಿ ನಿರತರಾಗಿ ಮುಂದಿನ ಪೀಳಿಗೆಯ ಮಕ್ಕಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ಧರ ಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೇದ ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನದ ಸಂಪತ್ತು ಎಂದು ಹೇಳುತ್ತದೆ. ನಮ್ಮ ಪುರಾತನ ಸಂಸ್ಕೃತಿಗೆ ಶ್ರೀಮಂತಿಕೆ ತಂದು ಕೊಟ್ಟಿರುವುದೇ ವೇದ, ಉಪನಿಷತ್ತುಗಳು ಅಂತಹ ಹೆಸರನ್ನು ತಮ್ಮ ಸಂಸ್ಥೆಗೆ ಇಟ್ಟಿರುವುದು ಸಂತಸದ ವಿಚಾರ ಎಂದರು. ವೇದ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಿ.ಟಿ ರವೀಂದ್ರ ಮಾತನಾಡಿ, ನಾನು ಶಿಕ್ಷಣ ತಜ್ಞನನ್ನಲ್ಲ, ಶಿಕ್ಷಣ ಪ್ರೇಮಿ. ಚಿಕ್ಕ ವಯಸ್ಸಿನಲ್ಲಿ ಶಿಕ್ಷಣದಿಂದ ವಂಚಿತನಾದೆ ಆದರೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಬೇಕು ಅನ್ನೋದು ನನ್ನ ಕನಸಾಗಿತ್ತು. ಅದು ಇಂದು ನನಸಾಗಿ ಕಣ್ಮುಂದಿದೆ. ಮಹಾನಗರಗಳಲ್ಲಿ ಓದಿಸಲು ಈ ಭಾಗದ ಜನರಿಗೆ ಕಷ್ಟ ಆಗುತ್ತಿದೆ. ಆದರೆ ನಮ್ಮ ಸಂಸ್ಥೆ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಮುನ್ನಡೆಯುತ್ತಿದೆ. ಶಾಲೆ ಆರಂಭ ಮಾಡುವಾಗ ಹಲವಾರು ಅಡೆತಡೆಗಳು ಎದುರಾದವು, ನಾನು ಕುಗ್ಗದೆ ಮುನ್ನುಗ್ಗಿದೆ ಅದರ ಪ್ರತಿಫಲದ ಸಾಕ್ಷಿಯೇ ವೇದ ಸಮೂಹ ಶಿಕ್ಷಣ ಸಂಸ್ಥೆಗಳು. ಈ ವರ್ಷದಿಂದ ಪದವಿ ಕಾಲೇಜು ಆರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ, ವೃತ್ತಿಪರ ಕೋರ್ಸ್ ಆರಂಭಿಸುವ ಯೋಜನೆ ಇದೆ ಎಂದು ಹೇಳಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ
ಭೂಮಿ ಮೇಲೆ ಸರಸ್ವತಿಯ ಕೃಪೆ ಇರುವವರೇ ಭಾಗ್ಯವಂತರು ಎಂದು ಮುಸಲ್ಮಾನ ರಾಜ ಆದಿಲ್ ಶಾ ಹೇಳಿದ್ದಾರೆ. ಸರಸ್ವತಿಯೇ ಇಲ್ಲಿ ನೆಲೆಸಿದಂತೆ ಭಾಸವಾಗುತ್ತದೆ.
ಶಿಕ್ಷಣ ಕ್ಷೇತ್ರ ಈಗ ಉದ್ಯಮವಾಗಿದೆ, ಆದ್ರೆ ರವೀಂದ್ರ ಅವರು ಶ್ರೇಷ್ಠ ದಾನವೆಂದು ಪರಿಗಣಿಸಿ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು…..
ಈ ಕಾರ್ಯಕ್ರಮದಲ್ಲಿ ಮರಿಸ್ವಾಮಿ, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ ಕುಮಾರಸ್ವಾಮಿ, ಡಾ.ವೀರಣ್ಣ, ವೇದ ಸಮೂಹ ಸಂಸ್ಥೆಯ ಟ್ರಸ್ಟಿಗಳಾದ ಸುವರ್ಣ ರವೀಂದ್ರ, ಕಾರ್ಯದರ್ಶಿ ಡಿ.ಆರ್.ಕಿರಣ್, ಪ್ರಧಾನ ವ್ಯಾವಸ್ಥಾಪಕ. ವಿಜಯ್ ಪ್ರಾಂಶುಪಾಲರಾದ ಸಂದೀಪ್,
ಪುಷ್ಪರಾಣಿ , ಸಂಸ್ಥೆಯ ವಿರೂಪಾಕ್ಷ , ಕೃಪಾ ವಿಜಯ್ . ವಿದ್ಯಾ ಕಿರಣ್, ಪ್ರಶಾಂತ್, ರವಿ. ಸಂಸ್ಥೆಯ ಉಪನ್ಯಾಸಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಜರಿದ್ದರು.






