ಮಂಡ್ಯ: ಬೀಗರ ಊಟ ಮುಗಿಸಿ ಹೊರಟಿದ್ದ ಐವರು ವಿಸಿ ನಾಲೆಗೆ ಬಲಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿರುವ ವಿಸಿ ನಾಲೆ ಎಂದರೆ ಹೆದರಿಕೆ ಕಾಡುತ್ತದೆ. ಯಾಕಂದ್ರೆ 2018ರಲ್ಲಿ ಈ ನಾಲೆಯಲ್ಲಿ ದೊಡ್ಡ ದುರಂತವೇ ನಡೆದಿತ್ತು. ಕನಕಮರಡಿಯ ವಿಸಿ ನಾಲೆಯಲ್ಲಿ ಬಸ್ ದುರಂತದಿಂದ ಅಂದು 39 ಜನ ಅಸುನೀಗಿದ್ದರು. ಅಂದಿನಿಂದ ಸಾವಿನ ಕೂಪವಾಗಿರುವ ವಿಸಿ ನಾಲೆ, ನಿನ್ನೆ ಮಂಗಳವಾರ ಮತ್ತೆ ಐವರನ್ನು ಬಲಿ ಪಡೆದಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ತಿಪಟೂರಿನ ಕೈದಾಳ ಗ್ರಾಮದವರೇ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೀಗರ ಮನೆಗೆ ಊಟಕ್ಕೆಂದು ಹೋಗಿದ್ದರು. ಆದರೆ ಬರುವಾಗ ಹೆಣವಾವಿ ಬಂದಿದ್ದಾರೆ. ಮೈಸೂರಿನ ಬೆಟ್ಟದೂರು ಗ್ರಾಮದಲ್ಲಿ ಬೀಗರ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ನೇಹಿತರೊಂದಿಗೆ ಬೀಗರೂಟಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದೆ. ಈ ಘಟನೆಯಿಂದ ಐವರು ಅಸುನೀಗಿದ್ದಾರೆ.
ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಬಾಬು ಹಾಗೂ ಜಯಣ್ಣ ಎನ್ನುವವರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ನಾಲೆಗೆ ಬಿದ್ದಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದಾರೆ. ಮೇಲಕ್ಕೆ ಎತ್ತುವ ವೇಳೆಗೆ ಕಾರಲ್ಲಿದ್ದವರೆಲ್ಲ ಸಾವನ್ನಪ್ಪಿದ್ದರು. ಮೃತದೇಹಗಳನ್ನ ಪಾಂಡವಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹಗಳನ್ನು ಹೊರ ತೆಗೆದಾಗ, ಒಬ್ಬನ ಜೇಬಲ್ಲಿ ಮೊಬೈಲ್ ರಿಂಗಣಿಸಿದೆ. ಈ ಮೂಲಕ ಸಿಬ್ಬಂದಿಗಳು, ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.