ಬಹಳ ಜನರು ಬದುಕುವುದು ಹೇಗೆಂದರೆ, ಅವರು ಹುಟ್ಟಿದುದೂ ಬದುಕಿದುದೂ ಸತ್ತದ್ದೂ ತಿಳಿಯಬೇಕಾದರೆ ಜನನ ಮರಣ ದಾಖಲೆಗಳನ್ನು ಜಾಲಾಡಬೇಕು. ಆದರೆ, ಕೆಲವೇ ಕೆಲವರು ಮಾತ್ರ ಬದುಕಿನ ರೀತಿಯಿಂದ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಂದ ಸಹಸ್ರಾರು ವರ್ಷ ಗತಿಸಿದರೂ ಜನಮಾನಸದಲ್ಲಿ ಉಳಿಯುತ್ತಾರೆ. ಮಾತೆ ವಾಸವಿಯು ಅಂತಹ ವಿರಳಾತಿವಿರಳರ ಸಾಲಿನಲ್ಲಿ ಸದಾ ಶೋಭಿಸುತ್ತಾಳೆ.
ಜಗತ್ತು ಈಗ ಯುದ್ಧೋನ್ಮಾದದಲ್ಲಿದೆ. ಉಕ್ರೇನ್ ಮತ್ತು ರಷ್ಯಾಗಳ ನಡುವಣ ಯುದ್ಧದಿಂದ ಜಗತ್ತು ತಲ್ಲಣಗೊಂಡಿದೆ. ಚೀನಾದ ಆಕ್ರಮಣ ನೀತಿಯನ್ನು ಸಹ ಜಗತ್ತು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಜಾಗತಿಕ ತವಕ ತಲ್ಲಣಗಳ ಮಧ್ಯೆ ವಾಸವಿ ಮಾತೆಯ ಆದರ್ಶ ಕರಾಳ ಕತ್ತಲೆಯಲ್ಲಿ ದೊಂದಿಯ ಬೆಳಕಾಗಿದೆ. ಜಗತ್ತಿನ ಪ್ರಪ್ರಥಮ ಸತ್ಯಾಗ್ರಹಿ ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಸ್ತುತಿಗೊಂಡ ಮಾತೆಯ ಆದರ್ಶವನ್ನು ಜಗತ್ತು ಅಳವಡಿಸಿಕೊಂಡಲ್ಲಿ ಯುದ್ಧಗಳು ಕೊನೆಗೊಳ್ಳುತ್ತವೆ.
ಯುದ್ಧ ಟ್ಯಾಂಕುಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ. ಜಗತ್ತು ಶಾಂತಿಯ ತೋಟವಾಗುತ್ತದೆ. ಅಂತಹ ಕಾಲ ಬರಲಿ ಎಂಬುದೇ ವಾಸವಿ ಜಯಂತಿಯ ಸಂದರ್ಭದ ಸದಾಶಯವಾಗಲಿ.
ನಾಡೋಜ ಹಂಪನಾ ಅವರ `ಚಾರು ವಸಂತ’ ಕಾವ್ಯದಲ್ಲಿನ ಸ್ತೋತ್ರ ಉಲ್ಲೇಖನೀಯವಾಗಿದೆ:
ತಾಯಿ ಕನ್ಯಕಾ ಪರಮೇಶ್ವರಿ ದೇವಿಯೆ
ವರ ವೈಶ್ಯಕುಲ ರಕ್ಷಾಮಣಿ ಶ್ರೀಮಾತೆಯೆ
ತ್ರಿಲೋಕವಂದಿತೆ ಸಂತಾನ ದೇವತೆಯೆ
ಆದಿದೇವಿಯೆ ಪದ್ಮಾವತಿ ಚಕ್ರೇಶ್ವರಿಯೆ
ದುರ್ಗೆಯು ನೀನೇ ಅಂಬಾ ಭವಾನಿ ತಾರಿಣಿ
ಅಷ್ಟಲಕ್ಷ್ಮಿಯರು ನಿನ್ನ ಅವತಾರವಂತೆ
ಅಂಬಿಕೆ ಮಂದಸ್ಮಿತೆ ಸುರುಚಿರೆ ಶುಚಿಸ್ಮಿತೆ
ನೀನೊಲಿದರೆ ಕೊರಡು ಕೊನರುವುದು ನಳನಳಿಸಿ
ಬರಡು ಹಯನಹುದು ಕಡುಬಡವನೂ ಒಡನೆಯೆ
ಬಲ್ಲಿದನಹನು. ಅಭಯಹಸ್ತ ಪ್ರಪೂರ್ಣೆಯೆ
ಕನ್ಯಕಾಶ್ರೀಮಾತೆಯಿರೆ ಅನ್ಯಮಾತೇಕೆಯೆನೆ
ಸಿರಿಸಂಪದಗಳರಸಿ ಬರುವುವು ಸರಸರನೆ
ನಯನಾಭಿರಾಮೆ ಮಾಣಿಕ್ಯ ಮಂಗಳಧಾಮೆ
ಅಭೀಷ್ಟವರ ಪ್ರದಾಯಿನಿ ಭಾಗ್ಯಲಕ್ಷ್ಮಿ ಉಮೆ
ಕರುಣಿಸು ವರವ ನಿರಂತರ ಪರಮ ಸುಖವ
ಕನ್ಯಕಾ ಪರಮೇಶ್ವರಿ ಲೋಕ ಜನ ಸನ್ನುತೆ
ಸಕಲವಣಿಜರ ಮನೆದೇವತೆ ನಮೋಸ್ತುತೇ
ರಾ. ವೆಂಕಟೇಶ ಶೆಟ್ಟಿ ನಿವೃತ್ತ ಪ್ರಾಂಶುಪಾಲರು
ಚಿತ್ರದುರ್ಗ-577502. ಮೊ.ನಂ: 9448268587, 9110451586