ಚಿತ್ರದುರ್ಗ, (ಅ.30) : ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ಎಲೆಮರೆಯ ಕಾಯಿಯಂತೆ ಅನಾಥ, ಅಬಲ, ವೃದ್ಧರಿಗೆ, ಬಡವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿದ್ದ ಪುನೀತ್ ರಾಜ್ಕುಮಾರ್ ನಟರಾಗಿ ಅಷ್ಟೆಅಲ್ಲದೇ ಹಿನ್ನೆಲೆಗಾಯಕರಾಗಿ ಗುರುತಿಸಿಕೊಂಡು ಚಿತ್ರರಂಗಕ್ಕೆ ಅಪಾರ ಸೇವೆಯನ್ನು ಬಾಲ್ಯದಿಂದಲೇ ನೀಡುತ್ತಾ ಬಂದಿದ್ದಾರೆ. ಅವರು ನಟನೆಯಿಂದ ಎಲ್ಲರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರರಾಗಿ ಪವರ್ಸ್ಟಾರ್ ಎಂದು ಗುರುತಿಸಿಕೊಂಡಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಮರೆಯಲಾಗದ ಸಾಧನೆಮಾಡಿದ ಡಾ.ರಾಜ್ಕುಮಾರ್ ರವರ ಕಿರಿಯಪುತ್ರನಾಗಿ ಬಾಲ್ಯದಿಂದಲೇ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ೪ ದಶಕಗಳ ಕಾಲ ಅಪಾರವಾದ ಕಲಾ ಸೇವೆಯನ್ನು ಗೈದಿದ್ದಾರೆ.
ಬೆಳ್ಳಿತೆರೆಯಲ್ಲಿ ಮಿಂಚಿದ ಸೂರ್ಯ ಪುನೀತ್ರಾಜ್ಕುಮಾರ್ ಕನ್ನಡ ಸಿನಿಮಾ ರಂಗಕ್ಕೆ ಇನ್ನು ಹೆಚ್ಚಿನ ಸೇವೆ ಸಲ್ಲಿಸಬೇಕಾದ ಅವಕಾಶವಿತ್ತು ಆದರೆ ಈ ಅಕಾಲಿಕ ಮರಣ ಕನ್ನಡ ಸಿನಿಮಾಲೋಕಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ಬಸವಾದಿ ಶರಣರು ನೋವು ಸಹಿಸುವ ಶಕ್ತಿ ತುಂಬಲಿ ಎಂದು ಶ್ರೀಗಳು ತಿಳಿಸಿದ್ದಾರೆ.
ಈ ವೇಳೆ ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ.ಶಾಂತವೀರ ಸ್ವಾಮೀಜಿ, ಪಂಚಮಸಾಲಿ ಪೀಠದ
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ , ಭಗೀರಥ ಗುರುಪೀಠದ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದ ಸ್ವಾಮೀಜಿ, ನಾರಾಯಣ ಗುರುಮಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ ಮತ್ತು ಕನಕ ಗುರುಪೀಠದ
ಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.