ಚಿತ್ರದುರ್ಗ,(ಜೂನ್.30) : ಇದೇ ಜೂನ್ 27 ರಿಂದ ಧಾರವಾಡ ಹಾಗೂ ಬೆಂಗಳೂರಿನ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭ ಶುರು ಮಾಡಿದ್ದು, ಮಂಗಳವಾರ ಹೊರತುಪಡಿಸಿ ಪ್ರತಿ ದಿನವೂ ಸಂಚರಿಸಲಿದೆ. ಇದು ಕರ್ನಾಟಕದಲ್ಲಿ ಸಂಚಾರ ಆರಂಭಿಸಿರುವ ಎರಡನೇಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ.
ಮೊದಲ ದಿನ ಮಾರ್ಗದ ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಸಚಿವಾಲಯದ ಆದೇಶದಂತೆ ನಿಲುಗಡೆ ನೀಡಲಾಗಿತ್ತು. ಅದರಂತೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಮೊದಲ ದಿನ ಅದ್ದೂರಿ ಸ್ವಾಗತ ಕೋರಲಾಗಿತ್ತು. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿಯವರ ಮನವಿಯ ಮೇರೆಗೆ ಚಿಕ್ಕಜಾಜೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿತ್ತು.
ಆದರೆ ಈ ಭಾಗದ ಜನರಲ್ಲಿ ಪ್ರತಿ ದಿನವೂ ಇಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆಂದು ಗೊಂದಲಕ್ಕೀಡಾಗಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು.
ಆದರೆ ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ದಾವಣಗೆರೆ ಮತ್ತು ಯಶವಂತಪುರದಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಮತ್ತೆ ಯಾವುದಾದರೂ ನಿಲ್ದಾಣದಲ್ಲಿ ನಿಲುಗಡೆ ಬೇಡಿಕೆ ಇದ್ದರೆ, ಅದನ್ನು ಪರಿಶೀಲಿಸಿ ದೆಹಲಿಯ ಸಚಿವರ ಕಚೇರಿಗೆ ಮುಂದಿನ ಆದೇಶಕ್ಕಾಗಿ ಕಳುಹಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.