ಬೆಂಗಳೂರು: ವಾಲ್ಮೀಕಿ ಹಗರಣದ ಕೇಸಲ್ಲಿ ಕಳೆದ ಒಂದು ವಾರದ ಹಿಂದಷ್ಟೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾಮೀನನ್ನು ನೀಡಿತ್ತು. ಇದರಿಂದ ನಾಗೇಂದ್ರ ಅವರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದ ನಾಗೇಂದ್ರ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸಿಬಿಐ ಅಧಿಕಾರಿಗಳು ಜಾಮೀನು ರದ್ಧತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ಸಂಬಂಧ ಇಂದು ಹೈಕೋರ್ಟ್ ನ್ಯಾ.ಸುನೀಲ್ ದತ್ ಯಾದವ್ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನ ವಾಲ್ಮೀಕಿ ಹಗರಣದ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಬಿ.ನಾಗೇಂದ್ರಗೆ ಸಮನ್ಸ್ ನೀಡಿದ್ದರು. ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಜನವರಿ 31 ರಂದು ವಿಚಾರಣೆ ನಡೆಸಿದ್ದ ಕೋರ್ಟ್ ವಾದ – ಪ್ರತಿವಾ್ ಆಲಿಸಿ, ಜನವರಿ 14 ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ನಾಗೇಂದ್ರ ಅವರು ಸಚಿವ ಸ್ಥಾನದಲ್ಲಿದ್ದಾಗ, ವಾಲ್ಮೀಕಿ ಅಭಿವೃದ್ಧಿ ಇಲಾಖೆಯಲ್ಲಿದ್ದರು. ಹಗರಣ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಮೇಲಂತು ನಾಗೇಂದ್ರ ಅವರ ತಲೆದಂಡವಾಗಿತ್ತು. ಸಚಿವ ಸ್ಥಾನವನ್ನೇ ತ್ಯಾಗ ಮಾಡಬೇಕಾಯ್ತು. ಮುಂದಿನ ದಿನಗಳಲ್ಲಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಸಂಪುಟ ಪುನರ್ ರಚನೆಯಾದ ಮೇಲೆ ಅವರಿಗೂ ಅವಕಾಶ ಕೊಡಲಿದ್ದಾರೆ ಎಂಬ ಮಾತಿತ್ತು. ಇದೀಗ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಒಂದು ವೇಳೆ ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೆ, ಸಚಿವರಾಗುವ ಕನಸು ಅಷ್ಟೇ..






