ಬೆಂಗಳೂರು: ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಇಡಿ ಅಧಿಕಾರಿಗಳು ಸಲ್ಲಿಕೆ ಮಾಡಿರುವ ವರದಿಯಲ್ಲಿ ಬಿ.ನಾಗೇಂದ್ರ ಅವರೇ ಮಾಸ್ಟರ್ ಮೈಂಡ್ ಆಗಿದ್ದಾರೆ. ವಾಲ್ಮೀಕಿ ಹಗರಣ ಬೆಳಕಿಗೆ ಬಂದಾಗ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ, ಸಲ್ಲಿಸಿದ್ದ ವರದಿಯಲ್ಲಿ ನಾಗೇಂದ್ರ ಅವರ ಹೆಸರು ಕೂಡ ಉಲ್ಲೇಖವಾಗಿರಲಿಲ್ಲ.
ಇದೀಗ ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ನಾಗೇಂದ್ರ ಸೂಚನೆಯಂತೆಯೇ ವ್ಯವಹಾರ ನಡೆದಿದೆ. 197 ಕೋಟಿ ವ್ಯವಹಾರದಲ್ಲಿ 97.32 ಕೋಟಿ ರೂಒಅಯಿ ವರ್ಗಾವಣೆಯಾಗಿತ್ತು. ನಿಗಮಕ್ಕೆ ಸೇರಿದ್ದ 12 ಕೋಟಿ ರೂಪಾಯಿ ಹಣ ಲೋಕಸಭಾ ಚುನಾವಣೆಗೆ ಬಳಕೆಯಾಗಿರುವುದು ಬಯಲಾಗಿತ್ತು. ಬೆಂಗಳೂರು, ಬಳ್ಳಾರಿಯಲ್ಲಿ ಹಣ ಹಂಚಿಕೆ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ಅಧಿಕಾರಿಗಳು ಕೂಡ ಪ್ರತ್ಯೇಕ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಆದರೆ ಇಡಿ ಮತ್ತು ಎಸ್ಐಟಿ ಎರಡು ತಂಡಗಳ ಆರೋಪಪಟ್ಟಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಸದ್ಯ ಇಡಿ ಅಧಿಕಾರಿಗಳು ಕೂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ವಾಲ್ಮೀಕಿ ಹಗರಣ ಯಾವ ರೀತಿಯಾದ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ವಾಲ್ಮೀಕಿ ಹಗರಣ ರಾಜ್ಯದಲ್ಲಿಯೇ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿತ್ತು.