ಬೆಂಗಳೂರು: ಶ್ರೀಮತಿ ಇಂದಿರಾಗಾಂಧಿ ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದರು. ದುರ್ಗೆ ಎಂದರೆ ದುಃಖವನ್ನು ದೂರ ಮಾಡುವ ದೇವಿ ಎಂದು ಅವರನ್ನು ಈ ರೀತಿ ಕರೆದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಬಡತನ ನಿರ್ಮೂಲನೆ, ಎಲ್ಲ ವರ್ಗದ ಜನರ ಕಲ್ಯಾಣದ ಬಗ್ಗೆ ಆಲೋಚಿಸಿದರು. ಪಿಂಚಣಿ, ಸೇನೆ, ಮನೆ ನಿರ್ಮಾಣ, ಬ್ಯಾಂಕ್ ರಾಷ್ಟೀಕರಣ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ, ವಸತಿ, ಕ್ರೀಡೆ, ಕೃಷಿ – ಹೀಗೆ ಎಲ್ಲವನ್ನೂ ಉತ್ತೇಜಿಸುವ ಕಾರ್ಯಕ್ರಮ ಕೊಟ್ಟರು. ಹೀಗಾಗಿ ವಾಜಪೇಯಿ ಅವರು ಪಕ್ಷಬೇಧ ಮರೆತು ಆ ಮಾತು ಹೇಳಿದ್ದಾರೆ. ದುರ್ಗೆಗೆ ಹೋಲಿಸಿದ್ದಾರೆ.
ಸವಾಲು ಮನೆ ಬಾಗಿಲಲ್ಲಿ ಇರುವುದಿಲ್ಲ, ನಾವು ಪರ್ವತ ಏರಬೇಕಿಲ್ಲ, ಸಮುದ್ರ ದಾಟಬೇಕಿಲ್ಲ. ನಮ್ಮ ಸವಾಲು ಹಳ್ಳಿಗಳಲ್ಲಿನ ಬಡತನ, ಪ್ರತಿ ಮನೆಯಲ್ಲಿರುವ ಜಾತಿ ವ್ಯವಸ್ಥೆ ಸರಿಪಡಿಸುವುದರಲ್ಲಿ ಇರುತ್ತದೆ, ಇರಬೇಕು. ಆಗ ದೇಶದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಿದ್ದರು.
ಒಂದು ವ್ಯಕ್ತಿ, ಒಂದು ಸಂಸ್ಥೆ ಮೇಲೆ ಪ್ರೀತಿ ಇದ್ದರೆ ಸಾಲದು. ಪ್ರೀತಿ ಜತೆಗೆ ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು. ಇತಿಹಾಸ, ನಮ್ಮ ನಾಯಕರ ತ್ಯಾಗ, ಬಲಿದಾನವನ್ನು ಯುವ ಸಮುದಾಯಕ್ಕೆ ತಿಳಿಸಬೇಕು.
ಯೂತ್ ಕಾಂಗ್ರೆಸ್ ಸಮಾವೇಶಕ್ಕಾಗಿ ನಾವು ರೈಲು ಹತ್ತಿದಾಗ, ಮಧ್ಯೆ ಇಂದಿರಾಗಾಂಧಿ ಅವರ ನಿಧನ ಸುದ್ದಿ ಬಂತು. ಗಲಾಟೆ ಹೆಚ್ಚಾಗಿತ್ತು. ನಮ್ಮನ್ನು ಬಂಧಿಸಿದ್ದರು. ನಂತರ ನಾನು ಚಿತ್ರ ಮಂದಿರಕ್ಕೆ ಪರವಾನಿಗೆ ಅರ್ಜಿ ಕೇಳಿದ್ದೆ. ಆಗ ಜಿಲ್ಲಾಧಿಕಾರಿಗಳು ಯಾರ ಹೆಸರು ಇಡುತ್ತೀಯಾ ಎಂದು ಕೇಳಿದರು. ನಾನು ಇಂದಿರಾಗಾಂಧಿ ಅವರ ಹೆಸರು ಎಂದೆ. ಆಗ ಕೇವಲ 5 ನಿಮಿಷದಲ್ಲಿ ಸಹಿ ಹಾಕಿಕೊಟ್ಟರು ಎಂದರು.