ಹುಬ್ಬಳ್ಳಿ: ಲಸಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಾಲು ಸಾಲು ಟ್ವೀಟ್ ಮಾಡಿ ಟೀಕೆ ಮಾಡಿದ್ರು. ಇದೀಗ ಸಿದ್ದರಾಮಯ್ಯ ನವರ ಹೇಳಿಕೆಗೆ ಸಚಿವ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯನವರು ಯಾವುದೇ ಪ್ರಗತಿ ಕಾರ್ಯವನ್ನು ವಿರೋಧಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಅಲ್ಲದಿದ್ದರೂ, ಒಬ್ಬ ಭಾರತೀಯರಾಗಿ ಕೋವಿಡ್ ಲಸಿಕೆಯ ಸಾಧನೆಯನ್ನು ಅವರು ಶ್ಲಾಘಿಸಬಹುದಿತ್ತು. ಸರ್ಕಾರ ನೀಡುವ ಅಂಕಿ, ಸಂಖ್ಯೆಯನ್ನು ಬುಡಮೇಲು ಮಾಡಿ ಅವರದ್ದೇ ಆದ ಅಂಕಿ, ಸಂಖ್ಯೆ ನೀಡಿದ್ದಾರೆ. ಅವರು ಕೂಡ ಮುಖ್ಯಮಂತ್ರಿಯಾಗಿದ್ದು, ಆಗಲೂ ಇದೇ ಇಲಾಖೆ ಅಂಕಿ ಅಂಶ ನೀಡುತ್ತಿತ್ತು. ಇಂತಹ ನಾಯಕರಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದರು.
ಲಸಿಕೆಯ ವಿಚಾರದಲ್ಲೂ ಅನೇಕರು ರಾಜಕಾರಣ ಮಾಡಿದರು. ಒಂದಾಗಿ ಹೋರಾಡಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡಿತು. ಸಹಕಾರದ ಹೆಸರಲ್ಲಿ ಅಸಹಕಾರ ಮಾಡಿದರು. ಇದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಲಸಿಕೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹೇಳಿದರು. ಪ್ರಾರಂಭದಲ್ಲಿ ಜನರು ಇವರ ಮಾತು ನಂಬಿ ಲಸಿಕೆ ಪಡೆಯದೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಕಾಂಗ್ರೆಸ್ ಗೆ ಈಗ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಬೇಕು. ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದರು.
ಕೋವಿಡ್ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಪ್ರತೀ ದಶ ಲಕ್ಷ ಜನ ಸಂಖ್ಯೆಗೆ ರಷ್ಯಾದಲ್ಲಿ 1,500, ಇಂಗ್ಲೆಂಡ್ ನಲ್ಲಿ 2,020 ಜನ ಕೋವಿಡ್ ನಿಂದ ಮೃತರಾಗಿದ್ದರೆ ಭಾರತದಲ್ಲಿ 323 ಜನರು ಕೋವಿಡ್ ನಿಂದ ಮೃತರಾಗಿದ್ದಾರೆ ಎಂದರು.
ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ. ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿಶೇಷ ಗೌರವವಿದೆ. ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆರೇಳು ವರ್ಷಗಳಿಂದ ಅವರು ಸಿಎಂ ಆಗಿದ್ದಾಗಿನಿಂದಲೂ ಈ ಸಮಸ್ಯೆ ಇದೆ. ಕೆ.ಎಚ್.ಮುನಿಯಪ್ಪನವರು ಆಗಲೇ ಈ ಕುರಿತು ದೂರು ನೀಡಿದ್ದರು. ತನಿಖೆಗೆ ಆದೇಶ ನೀಡಿ ಎಂದು ಅವರು ಕೋರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತನಿಖೆ ಮಾಡಿಸಲು ಒಪ್ಪಲೇ ಇಲ್ಲ. ಇಂದು ಕೂಡ ಅವರ ಪಕ್ಷದ ನಾಯಕರು, ಹಿಂಬಾಲಕರು ಮಾಡುವ ತಪ್ಪನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ? ಭ್ರಷ್ಟಾಚಾರದ ಪರವಾಗಿ ಅವರು ಇದ್ದಾರಾ? ಎಂದು ಪ್ರಶ್ನೆ ಮಾಡಿದರು.
ಸಹಕಾರ ಕ್ಷೇತ್ರದ ಜನರಿಗೆ, ರೈತರಿಗೆ ಸರಿಯಾದ ಆಡಳಿತ ನೀಡಬೇಕೆಂಬ ಬದ್ಧತೆ ಇದ್ದರೆ, ಅವರೇ ತನಿಖೆಗೆ ಆದೇಶ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕರ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಅಧಿಕಾರದ ಮದ ಎನ್ನುವುದಾದರೆ ಜನರ ತೀರ್ಮಾನಕ್ಕೆ ಬಿಡುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.