ಬೆಂಗಳೂರು: ಕೊರೊನಾ ತಡೆಯುವ ವಿಚಾರದಲ್ಲಿ ಮತ್ತು ರಾಜತಾಂತ್ರಿಕ ಸಂಬಂಧ ಬೆಳಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತತ್ವಜ್ಞಾನಿಯಂತೆ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ದೂರದೃಷ್ಟಿಯ ಯೋಚನೆ*ಗಳು ಭಾರತದಲ್ಲಿ ಆಗಬಹುದಾಗಿದ್ದ *ಕೋಟ್ಯಾಂತರ ಸಾವು ನೋವುಗಳನ್ನು ತಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕಾಕರಣದಿಂದ ಭಾರತ ಕೋವಿಡ್ ಅನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಎದುರಿಸಿದೆ. ಸಂಭಾವ್ಯ 4ನೇ ಅಲೆಯನ್ನು ತಡೆಯಲು ಕೂಡ ಲಸಿಕೆ ಒಂದೇ ಅಸ್ತ್ರ. ಸರ್ಕಾರ ನೀಡುವ ಲಸಿಕೆಯನ್ನು ಸಾರ್ವಜನಿಕರು ಶೀಘ್ರದಲ್ಲೇ ಪಡೆದುಕೊಂಡು ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ ಎಂದು ಹೇಳಿದರು.

ಅನೇಕ ದೇಶಗಳಲ್ಲಿ ಈ ಹಿಂದೆಯೂ ಸಾಂಕ್ರಾಮಿಕ ರೋಗಗಳು ಬಂದ್ದವು . ಸ್ಪಾನಿಷ್ ಫ್ಲೂ, ಪ್ಲೇಗ್* ನಂತಹ ಸಾಂಕ್ರಾಮಿಕ ಕಾಯಿಲೆಗಳು ಮರಾಣಾಂಕತಿವಾಗಿದ್ದವು. ದಾಖಲೆಗಳ ಪ್ರಕಾರ ಊರು ಬಿಟ್ಟು ಬೇರೆ ಊರಿಗೆ ಗುಳೆ ಹೋದವರಿದ್ದಾರೆ. ಸ್ಪಾನಿಷ್ ಫ್ಲೂ ಕಾಯಿಲೆಯಲ್ಲಿ ಸತ್ತವರಿಗಿಂತ ಹಸಿವಿನಿಂದ ಸತ್ತಿದ್ದಾರೆ ಅನ್ನುವುದನ್ನು ದಾಖಲೆಗಳು ಹೇಳುತ್ತವೆ. ಆದರೆ ಪ್ರಧಾನಿಯವರ ದೂರದೃಷ್ಟಿಯ ಯೋಜನೆಗಳು ಕೊರೊನಾದ ವೇಳೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಿದೆ* ಎಂದು ತಿಳಿಸಿದರು.
2020ರ ಜನವರಿ ವೇಳೆಯಲ್ಲಿ ಕಂಡು ಕೇಳರಿಯದ ಸಾಂಕ್ರಾಮಿಕ ರೋಗ ಕೊರೊನಾ ಭಾರತಕ್ಕೆ ಕಾಲಿಟ್ಟಿತ್ತು. ಝೊನಾಟಿಕ್ ಇನ್ಫೆಕ್ಷನ್ ವೈರಸ್ ಗಳಿಂದ ಕೊರೊನಾ ಪ್ರಾಣಿಗಳಿಂದ ಮನುಷ್ಯನಿಗೆ ಬಂತು. ಶತಮಾನದಲ್ಲಿ ಕಾಣದೇ ಇದ್ದಂತಹ ಸಾಂಕ್ರಾಮಿಕ ರೋಗ ಇದಾಗಿತ್ತು. ವೈದ್ಯಕೀಯ ಜಗತ್ತಿಗೂ ಸವಾಲು ಮತ್ತು ಕುತೂಹಲ ಇತ್ತು. ಪ್ರಧಾನಿ ನರೇಂದ್ರ ಮೋದಿಯವರು ಮುತ್ಸದಿಯಾಗಿ, ಸಮಗ್ರ ಮತ್ತು ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡಲು ಯೋಜನೆ ರೂಪಿಸಿದ್ದರು. 135 ಕೋಟಿ ಜನಸಂಖ್ಯೆ ಇದ್ದಂತಹ ಈ ದೇಶದಲ್ಲಿ ಕೊರೊನಾವನ್ನು ನಿಯಂತ್ರಣಕ್ಕೆ ತಂದಿದ್ದು ಐತಿಹಾಸಿಕ ಮತ್ತು ಕೇಸ್ ಸ್ಟಡಿಯೂ ಆಗಿದೆ ಎಂದು ಅಭಿಪ್ರಾಯ ಪಟ್ಟರು.

