ಸುದ್ದಿಒನ್, ಚಿತ್ರದುರ್ಗ, (ಸೆ.30) : ‘ಹಾಲುಸ್ವಾಮಿ ದೇವರು ಹೇಳೈತೆ ಸೂಜಿ ಮಾಡಿಸಬೇಡ ಅಂತ’ ಅದಕ್ಕೆ ನಾವು ಲಸಿಕೆ ಹಾಕಿಸಿಕೊಂಡಿಲ್ಲ.. ಹೀಗೆ ಖುದ್ದು ವೈದ್ಯರಿಗೆ ಹೇಳುತ್ತಿದ್ದಾರೆ ತಾಲ್ಲೂಕಿನ ಕರಿಹಟ್ಟಿ ಗ್ರಾಮಸ್ಥರು.
ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನದ ಹಿನ್ನೆಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಗ್ರಾಮದ ಮನೆ ಮನೆ ಭೇಟಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಬಳಿಕ ಗ್ರಾಮದ ಹಾಲುಸ್ವಾಮಿ ದೇವಸ್ಥಾನದ ಬಳಿ ಸಮಾಲೋಚನಾ ಸಭೆ ನಡೆಸುವಾಗ ತಾವುಗಳು ಲಸಿಕೆ ಪಡೆಯಲು ಏಕೆ ಹಿಂಜರಿಯುತ್ತಿದ್ದೀರ ? ನಿಮ್ಮ ಸಮಸ್ಯೆಯಾದರು ಏನು ನಾವು ಬಗೆಹರಿಸುತ್ತೇವೆ ಎಂದು ಗಿರೀಶ್ ಕೇಳಿದರು. ನೆರೆದಿದ್ದ ನಾಗರೀಕರೊಬ್ಬರು ಹಾಲುಸ್ವಾಮಿ ದೇವರು ಹೇಳೈತೆ ಸೂಜಿ ಮಾಡಿಸಬೇಡ ಅಂತ. ಅದಕ್ಕೆ ನಾವು ಲಸಿಕೆ ಹಾಕಿಸಿಕೊಂಡಿಲ್ಲ ಎಂದರು.
ಕೂಡಲೇ ಸ್ಥಳದಲ್ಲಿದ್ದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ದೇವಸ್ಥಾನದ ಪೂಜೆ ಮಾಡುವವರನ್ನು ಸ್ಥಳಕ್ಕೆ ಕರೆಸಿ ಎಲ್ಲರ ಸಮ್ಮುಖದಲ್ಲಿ ಪೂಜಾರಿಯ ಮುಂದೆ ಸಮಸ್ಯೆ ತೆರೆದಿಟ್ಟರು.
‘ಇಲ್ಲ ಸ್ವಾಮಿ…ಇವರೆಲ್ಲಾ ಮಾರಮ್ಮನ ಹಬ್ಬ ಮಾಡಿ ಮದ್ಯಪಾನ ಮಾಂಸಾಹಾರ ಮಾಡಿ ಲಸಿಕೆ ಪಡೆದು ಅಡ್ಡಪರಿಣಾಮವಾಗಿ ಸಾವು ಸಂಭವಿಸುತ್ತದೆ ಎಂದು ಹೆದರುತ್ತಿದ್ದಾರೆ ಅಷ್ಟೇ. ದೇವರು ಏನು ಅಪ್ಪಣೆ ಮಾಡಿಲ್ಲ’ ಎಂದು ಸಭೆಗೆ ತಿಳಿಸಿದರು.
ಆಗ ಡಾ.ಬಿ.ವಿ.ಗಿರೀಶ್ ‘ಮದ್ಯಪಾನ ಮಾಂಸಾಹಾರಕ್ಕೂ ಲಸಿಕೆ ಪಡೆದು ಕೊಳ್ಳುವುದಕ್ಕೂ ಸಂಬಂಧ ಕಲ್ಪಿಸುವುದು ಬೇಡ. ಲಸಿಕೆ ಗುಣಮಟ್ಟದ್ದಾಗಿದೆ ಇದರ ಬಗ್ಗೆ ಅನುಮಾನ ಬೇಡ. ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಲು ಲಸಿಕೆ ಪಡೆಯಿರಿ ಎಂದು ಜಾಗೃತಿ ಮೂಡಿಸಿದರು.
ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸಿ ಲಸಿಕೆ ನಿರಾಕರಿಸಿದ 70 ಜನರಿಗೆ ಅಂತರ್ ವೈಯ್ಯಕ್ತಿಕ ಸಮಾಲೋಚನೆ ನಡೆಸಿ ಲಸಿಕೆ ಹಾಕಿಸಲಾಯಿತು.
ಡಾ.ಶೈಲ ಕೊಳ್ಳಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಜಾನಕಿ, ಆರೋಗ್ಯ ಸುರಕ್ಷಾಧಿಕಾರಿಗಳಾದ ಮಾರುತಿ ಪ್ರಸಾದ್, ದೇವೀರಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.