ವರದಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.13 : ಇದೇ ಅಕ್ಟೋಬರ್ 17 ರಿಂದ ನವೆಂಬರ್ 11 ರ ವರೆಗೂ ವಿ.ವಿ. ಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ. ತಿಳಿಸಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ವಿಶೇಷ ಆಹ್ವಾನಿತರಾಗಿ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದ ಡಿ.ಸುಧಾಕರ್ ಆಗಮಿಸಿದ್ದರು.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿ, ಬರಗಾಲ ಪೀಡಿತವಾಗಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರು ಅವಶ್ಯವಾಗಿರುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಲಹಾ ಸಮಿತಿ ಸದಸ್ಯರುಗಳು ಹಾಗೂ ಅಧಿಕಾರಿಗಳು ತಿಳಿಸುತ್ತಾ, ವಿವಿ.ಸಾಗರ ಜಲಾಶಯದಿಂದ ಒಂದು ಹದದ ನೀರನ್ನು 30 ದಿನಗಳ, ಕಾಲ,
ನಾಲೆಗಳಿಗೆ ಹರಿಸುವಂತೆ ಮಾನ್ಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ನೀರು ನಾಲೆಗಳಲ್ಲಿ ಹರಿಸುವುದರಿಂದ ನಾಲೆಯ ಅಕ್ಕಪಕ್ಕದ ಎಲ್ಲಾ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅಲ್ಲದೇ ತೋಟಗಾರಿಕೆ ಬೆಳೆಗಳು ಹಾಗೂ ಅಲ್ಪ ಸ್ವಲ್ಪ ಒಣಗಿರುವ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ಸಲಹಾ ಸಮಿತಿ ಸದಸ್ಯರು ಅಭಿಪ್ರಾಯ ತಿಳಿಸಿದರು.
ಸದಸ್ಯರ ಮನವಿಯ ಮೇರೆಗೆ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಯವರು ದಿನಾಂಕ 17.10.2023 ರಿಂದ 16,11.2023 ರವರೆಗೆ ನೀರು ಹರಿಸಲು ಸೂಚಿಸಿದರು. ಪ್ರಸ್ತುತ ವಿವಿ ಸಾಗರ ಜಲಾಶಯದಲ್ಲಿ 121.15 ಅಡಿಗಳಷ್ಟು ಮತ್ತು 22.00 ಟಿ.ಎಂ.ಸಿ. ನೀರು ಇದೆ.
ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಸಮರ್ಪಕವಾದ ನೀರು ನಿರ್ವಹಣೆ ಮಾಡಲು ಹಾಗೂ ನೀರು ಯಾವುದೇ ಕಾರಣಕ್ಕೆ ಪೋಲಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಮಾನ್ಯ ಜಿಲ್ಲಾಧಿಕಾರಿಗಳು ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ನೀರು ಹರಿಸುವ ಪೂರ್ವದಲ್ಲಿ ಮುಂಜಾಗ್ರತಾವಾಗಿ ಜನ ಜಾನುವಾರುಗಳಿಗೆ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಲು ವ್ಯಾಪಕವಾಗಿ ಜಾಗೃತಿ ಮೂಡಿಸಲು ಸೂಚಿಸಿದರು.
ಈ ಸಭೆಯಲ್ಲಿ ಭಾಗವಹಿಸಿದ ಸಲಹಾ ಸಮಿತಿ ಸದಸ್ಯರುಗಳಾದ .ಕೆ.ಟಿ.ತಿಪ್ಪೇಸ್ವಾಮಿ, ಶ್ರೀ.ಸಿದ್ದರಾಮಣ್ಣ, ಶ್ರೀ.ಆರ್.ಗೌಡ ಮತ್ತು ಶ್ರೀ ರಾಮಕುಮಾರ್ ಹಾಗೂ ಅಧಿಕಾರಿಗಳಾದ ವಿಜಯಕುಮಾರ್.ಎ.ಎಂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ವಿ.ವಿ.ಸಾಗರ ಉಪವಿಭಾಗ, ಹಿರಿಯೂರು, ಲೋಕೇಶ್, ಹಿರಿಯ ಸಹಾಯಕ ನಿರ್ದೇಶಕರು – ತೋಟಗಾರಿಕಾ ಇಲಾಖೆ, ಹಿರಿಯೂರು, ಕಿರಣ್, ಸಹಾಯಕ ಕೃಷಿ ಅಧಿಕಾರಿಗಳು, ಹಿರಿಯೂರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.