ಬೆಂಗಳೂರು: ದೇವಾಲಯ ವ್ಯಾಪ್ತಿ, ಜಾತ್ರೆಗಳಲ್ಲಿ ನಿರ್ಬಂಧ ವಿಚಾರವನ್ನ ವಿಧಾನಸಭೆಯಲ್ಲಿ ಯು ಟಿ ಖಾದರ್ ಪ್ರಸ್ತಾಪ ಮಾಡಿದ್ದಾರೆ.ಈ ವೇಳೆ ಸದನದಲ್ಲಿ ಜೋರು ಗದ್ದಲವೇ ಆಗಿದೆ. ಸಭಾಪತಿಗಳು ಎಲ್ಲರನ್ನ ಸಮಾಧಾನಪಡಿಸಿ ಆ ಬಳಿಕ ಯು ಟಿ ಖಾದರ್ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ವೇಳೆ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ನಿರ್ಬಂಧ ಹಾಕಿದವರ ವಿರುದ್ಧ ಹರಿಹಾಯ್ದಿರುವ ಯು ಟಿ ಖಾದರ್, ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು ಎಂದಿದ್ದಾರೆ. ಇದಕ್ಕೆ ಸದನದಲ್ಲಿ ಮತ್ತೆ ಪ್ರತಿರೋಧ ಕೇಳಿ ಬಂದಿದ್ದು, ಹೇಡಿಗಳು ಅನ್ನೋ ಪದವನ್ನ ಹಿಂಪಡೆಯುವಂತೆ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಮಾತು ಮುಂದುವರೆಸಿದ ಖಾದರ್, ಹೆಸರು ಹಾಕದೆ ಕೆಲವರು ಭಿತ್ತಿಪತ್ರಗಳನ್ನ ಹಾಕುತ್ತಿದ್ದಾರೆ. ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಭಿತ್ತಿಪತ್ರ ಹಾಕುವುದು ಪೊಲೀಸರಿಗೆ ಗೊತ್ತಿಲ್ಲವಾ..? ಪೊಲೀಸರು ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತೆ. ಸಮಾಜದಲ್ಲಿ ವೈಮನಸ್ಸು ಸೃಷ್ಟಿಗೆ ಅವಕಾಶ ನೀಡಬಾರದು. ಭಿತ್ತಿ ಪತ್ರ ಹಾಕಿದವರ ಉದ್ದೇಶವೆನೆಂಬುದು ಬಯಲಾಗಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯು ಟಿ ಖಾದರ್ ಒತ್ತಾಯಿಸಿದ್ದಾರೆ.

