ಬೆಳಗಾವಿ: ಇಂದು ಮಧ್ಯಾಹ್ನದಿಂದಾನೂ ಸಿಟಿ ರವಿ ಆಡಿದ್ದಾರೆ ಎನ್ನಲಾದ ಮಾತುಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಳಸಿರುವ ಅಶ್ಲೀಲ ಪದಕ್ಕೆ ಎಲ್ಲರಿಂದಾನೂ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಟಿ ರವಿ ಅರೆಸ್ಟ್ ಆಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಎಂಎಲ್ಸಿ ಸಿ.ಟಿ ರವಿ ವಿರುದ್ಧ ಬಿಎನ್ಎಸ್ ಆ್ಯಕ್ಟ್ ಸೆಕ್ಷನ್ 75 ಮತ್ತು ಸೆಕ್ಷನ್ 79 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೆಕ್ಷನ್ 75 ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಗೆ ನಿಂದನೆ ಹಾಗೂ ಸೆಕ್ಷನ್ 79 ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ ಆಗಿದ್ದು, ಜಾಮೀನು ರಹಿತ ಕೇಸ್ ಇದಾಗಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸ್ರು ಎಫ್ಐಆರ್ ಮಾಡಿದ್ದಾರೆ. ಹೀಗಾಗಿ ಸಿ.ಟಿ ರವಿ ಬಂಧನವಾಗಿದೆ.
ಇಂದು ವಿಧಾನ ಪರಿಷತ್ ಅಧಿವೇಶನದ ವೇಳೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪವಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ.. ಎಂಬ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಪದ ಬಳಕೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿವೇಶನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಯಾವುದೇ ಹೆಣ್ಣು ಮಗುವಿಗಾಗಲೀ ಅಂಥಹ ಕೆಟ್ಟ ಪದ ಬಳಕೆ ಮಾಡಿದರೆ ಸಹಿಸುವುದಾದರೂ ಹೇಗೆ..? ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಉಮಾಶ್ರೀ ಸೇರಿದಂತೆ ಕಾಂಗ್ರೆಸ್ ನಾಯಕರು ಸಿಟಿ ರವಿ ನಡೆಯನ್ನು ವಿರೋಧಿಸಿದ್ದಾರೆ.