ಚಿತ್ರದುರ್ಗ, (ಫೆಬ್ರವರ.03) : ಜಿಲ್ಲೆಯಲ್ಲಿ ಪ್ರಸ್ತುತ ಬೇಸಿಗೆ ಶೇಂಗಾ ಬೆಳೆ 15 ರಿಂದ 45 ದಿನಗಳ ಬೆಳವಣಿಗೆ ಹಂತದಲ್ಲಿರುತ್ತದೆ. ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ವಾಹನವು ಹಿರಿಯೂರು ತಾಲ್ಲೂಕು ಮ್ಯಾಕಲೂರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಶೇಂಗಾ ಬೆಳೆಯನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಆರಂಭಿಕ ಎಲೆ ಚುಕ್ಕೆ ರೋಗ ಕಂಡು ಬಂದಿರುತ್ತದೆ.
ಎಲೆ ಚುಕ್ಕೆ ರೋಗವು ಹಿರಿಯೂರು ತಾಲ್ಲೂಕಿನ ಮ್ಯಾಕಲೂರಹಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ಹಾಗೂ ಬೇಸಿಗೆ ಶೇಂಗಾ ಬೆಳೆದಂತಹ ಉಳಿದ ಎಲ್ಲಾ ತಾಲ್ಲೂಕುಗಳಲ್ಲೂ ಸಹ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ.
ಎಲೆಚುಕ್ಕೆ ರೋಗದ ಹತೋಟಿಗಾಗಿ ಮ್ಯಾಂಕೊಜೆಬ್ 2ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಟೆಬುಕೋನಜೋಲ್ 1 ಮೀಲೀ ಪ್ರತಿ ಲೀಟರ್‍ಗೆ ಅಥವಾ ಕಾಪರ್ ಆಕ್ಸಿಕ್ಲೋರೈಡ್ 3ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಚೌಧರಿ ತಿಳಿಸಿದ್ದಾರೆ.