ಚಿತ್ರದುರ್ಗ: ನೈಸರ್ಗಿಕವಾಗಿ ಸಿಕ್ಕಿರುವ ನೀರನ್ನು ವ್ಯರ್ಥ ಮಾಡೆದ ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಶುದ್ದವಾದ ಕುಡಿಯುವ ನೀರನ್ನು ಜೋಪಾನ ಮಾಡಬೇಕಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಮಕ್ಕಳಿಗೆ ತಿಳಿಸಿದರು.
ಮೆದೇಹಳ್ಳಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನವನ್ನು ಶಾಲಾ ಆವರಣದಲ್ಲಿರುವ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿದತ್ತವಾದ ನೀರು ಸಕಲ ಜೀವ ಸಂಕುಲಕ್ಕೂ ಅತ್ಯವಶ್ಯಕವಾಗಿ ಬೇಕು. ಸಮುದಾಯದ ಸ್ವತ್ತು ನೀರನ್ನು ಯಾರಿಗೂ ಇಲ್ಲ ಎನ್ನುವಂತಿಲ್ಲ. ಶುದ್ದವಾದ ಕುಡಿಯುವ ನೀರು ಇಲ್ಲದೆ ಅದೆಷ್ಟೊ ಮಂದಿ ಸಾಯುತ್ತಿದ್ದಾರೆ. ಇನ್ನು ಕಲುಷಿತ ನೀರು ಸೇವನೆಯಿಂದ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವುದುಂಟು. ನೀರಿಗಾಗಿ ಈಗಾಗಲೆ ಹಾಹಾಕಾರ ಎದ್ದಿದೆ. ಅರಣ್ಯದಿಂದ ಪಕ್ಷಿ ಪ್ರಾಣಿಗಳು ನೀರಿಲ್ಲದೆ ಕೆಲವೊಮ್ಮೆ ನಾಡಿಗೆ ಬರುವುದುಂಟು. ನಿಸರ್ಗದ ಸಂಪತ್ತು ನೀರನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕುಡಿಯಲು ಬಿಡಿ ಎಂದು ಹೇಳಿದರು.
ನೀರಿಗಿರುವ ಬೆಲೆ ಪ್ರಪಂಚದಲ್ಲಿ ಬೇರೆ ಯಾವುದಕ್ಕೂ ಇಲ್ಲ. ಶ್ರೀಮಂತನಿಂದ ಹಿಡಿದು ಕಡು ಬಡವನು ಬಾಯಾರಿಕೆ ನೀಗಿಸಿಕೊಳ್ಳಲು ನೀರನ್ನೆ ಕುಡಿಯಬೇಕು. ಯಾರು ತುಪ್ಪ ಕುಡಿಯುವುದಿಲ್ಲ. ಜೀವಜಗತ್ತಿಗೆ ಆಧಾರ ಸ್ಥಂಭವಾಗಿರುವ ನೀರು ಎಲ್ಲಾ ಕಾಯಿಲೆಗಳ ನಿವಾರಣೆಗೆ ಸಿದ್ದೌಷಧಿಯಿದ್ದಂತೆ. ನಗರದ ಹೊರ ವಲಯದಲ್ಲಿರುವ ಮಲ್ಲಾಪುರದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಪರಿಶುದ್ದವಾದ ನೀರು ಎಲ್ಲರಿಗೂ ಜನ್ಮಸಿದ್ದ ಹಕ್ಕಾಗಿರುವುದರಿಂದ ಕುಡಿಯುವ ನೀರಿಗೆ ಆದ್ಯತೆ ಕೊಡಿ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಪವಿತ್ರ ಮಾತನಾಡಿ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡಬಾರದು. ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ನೀರಿನ ಮಹತ್ವ ತಿಳಿಸಬೇಕಿದೆ.
ಈಗಿನಿಂದಲೆ ಶುದ್ದವಾದ ಕುಡಿಯುವ ನೀರನ್ನು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಉಪಯೋಗವಾಗಲಿದೆ ಎಂದು ನೀರಿನ ಮಹತ್ವ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಷಣ್ಮುಖಪ್ಪ ಮಾತನಾಡಿ ಪ್ರತಿಯೊಬ್ಬರಿಗೂ ಶುದ್ದವಾದ ಕುಡಿಯುವ ನೀರು ಬೇಕು. ಮಳೆಗಾಲದಲ್ಲಿ ನೀರನ್ನು ಹರಿದು ಹೋಗಲು ಬಿಡದೆ ಭೂಮಿಯಲ್ಲಿ ಇಂಗಿಸುವ ಕೆಲಸವಾಗಬೇಕು. ಇದರಿಂದ ಬೇಸಿಗೆಯಲ್ಲಿ ನೀರನ್ನು ಮರುಪೂರಣ ಮಾಡಿ ಬಳಕೆ ಮಾಡಿಕೊಳ್ಳಬಹುದಲ್ಲದೆ ಕೆರೆ ಕಟ್ಟೆಗಳನ್ನು ಉಳಿಸಿ ನೀರು ಸಂಗ್ರಹಿಸಿದರೆ ಸಕಲ ಜೀವರಾಶಿಗಳಿಗೂ ಪ್ರಯೋಜನವಾಗಲಿದೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮಾರೇಶ್, ಉಪಾಧ್ಯಕ್ಷೆ ಭಾಗ್ಯಮ್ಮ ಸಹ ಶಿಕ್ಷಕ ನವೀನ್, ದುಗ್ಗಪ್ಪ ವೇದಿಕೆಯಲ್ಲಿದ್ದರು.