ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, ಮಾ.8: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಇದರ ಪರಿಣಾಮವಾಗಿ ಅನೇಕ ಮಹಿಳೆಯರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಆಗಿದ್ದಾರೆ. ಆದರೆ ಇಲ್ಲಿ ಮಹಿಳೆಯರು ಅಧಿಕಾರ ಚಲಾಯಿಸುವ ಬದಲಿಗೆ ಅವರ ಗಂಡಂದಿರು ಅಧಿಕಾರ ಚಲಾಯಿಸುತ್ತಾರೆ ಇದು ಬದಲಾಗಬೇಕು. ಮಹಿಳೆಯರು ಸ್ವತಃ ರಾಜಕೀಯ ಅಧಿಕಾರ ಚಲಾಯಿಸಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಎನ್.ಆರ್.ಎಲ್.ಎಂ-ಸಂಜೀವಿನಿ ಸಹಯೋಗದಲ್ಲಿ ಬುಧವಾರ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯಲ್ಲೂ ಕೂಡ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಗೆ ನೀಡಬೇಕು ಎಂಬ ಬೇಡಿಕೆ ಬಹುದಿನಗಳಿಂದ ಪ್ರಚಲಿತದಲ್ಲಿದೆ. ಈ ಬೇಡಿಕೆ ಇದುವರೆವಿಗೂ ಈಡೇರಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತಿಗತಿಗಳು ಬದಲಾಗಬಹುದು. ಮಹಿಳೆಯರು ತಮಗೆ ನೀಡಿರುವ ರಾಜಕೀಯ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಮಥ್ರ್ಯಗಳಿಸಿ ಸಮಾಜದಲ್ಲಿ ಸಮಾನತೆ ಸಾಧಿಸಬೇಕು ಎಂದರು.
ಪ್ರಜಾಪ್ರಭುತ್ವಕ್ಕೆ ಮಾದರಿ ಎನಿಸಿದ ಅಮೇರಿಕಾದ ದೇಶದ ಚುನಾವಣೆಯಲ್ಲಿ ಇದುವರೆವಿಗೂ ಒಬ್ಬ ಮಹಿಳೆ ಅಧ್ಯಕ್ಷೆಯಾಗಿ ಆಯ್ಕೆಯಾಗಿಲ್ಲ. ಆದರೆ ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಏಷ್ಯಾ ದೇಶಗಳಲ್ಲಿ ಮಹಿಳೆಯರು ಪ್ರಧಾನ ಮಂತ್ರಿಯಾಗಿ ಅಧಿಕಾರ ಅಲಂಕರಿಸಿದ್ದಾರೆ.
ಭಾರತದಲ್ಲಿ ವಿಶೇಷವಾಗಿ ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರ ಮಹಿಳೆಯರು ಹಾಗೂ ಮಹಿಳಾ ಸಂಘಟನೆಯ ಪೆÇ್ರೀತ್ಸಾಹ ನೀಡುತ್ತಿದೆ. ಬಹು ದಿನಗಳ ಹಿಂದೆ ಹೆಣ್ಣುಮಗು ಜನಿಸಿದರೆ ಬೇಸರ ಪಡುವ ಸಂಗತಿ ಇತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಬೇಟಿ ಬಚಾವೋ ಬೇಟಿ ಪಡವೋ’ ಎಂಬ ಯೋಜನೆ ಜಾರಿಗೆ ತಂದರು.
ಜನನಕ್ಕೂ ಮುನ್ನವೇ ಹೆಣ್ಣು ಮಗುವಿನ ರಕ್ಷಣೆಗೆ ಕಾನೂನು ರೂಪಿಸಲಾಗಿದೆ. ಇದರ ಫಲವಾಗಿ ದೇಶದ ಲಿಂಗಾನುಪಾತದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾಗಿದೆ. ಸರ್ಕಾರದ ಯೋಜನೆಗಳನ್ನು ಮಹಿಳಾ ಹೆಸರಿನಲ್ಲಿ ನೀಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರು ಇದನ್ನು ಸರಿಯದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಾಗಿದೆ ಎಂದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ ಹಿಂದೆ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಸದ್ಯ ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಮಹಿಳೆಯುರು ಜಿಲ್ಲೆಯಲ್ಲಿ ಮಹಿಳಾ ಸಂಘಟನೆಗಳು ಹಾಗೂ ಸಹಕಾರಿ ಸಂಘಗಳು ಮುತುವರ್ಜಿಯಿಂದ ನಡೆಸಿಕೊಂಡು ಹೋಗುತ್ತಾರೆ. ಇದರಿಂದ ಮಹಿಳಾ ಸಂಘಗಳಿಗೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತವೆ. ಗ್ರಾಮೀಣ ಬ್ಯಾಂಕ್‍ಗಳಲ್ಲಿ ಮಹಿಳಾ ಸಂಘಗಳಿಂದ ಠೇವಣಿ ಇಡುತ್ತಿದ್ದಾರೆ. ಇದರಿಂದ ಬ್ಯಾಂಕ್‍ಗಳಲ್ಲಿ ಹಣ ಹೆಚ್ಚಾಗಿ ಸುಲಲಿತವಾಗಿ ಕಾರ್ಯನಿರ್ವಹಿಸಲು ಸಹಾಯವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಮಹಿಳೆಯರಾಗಿ ಜನಿಸಲು ಪುಣ್ಯ ಮಾಡಬೇಕು. ಜನ್ಮನೀಡುವ ಶಕ್ತಿಯನ್ನು ಪ್ರಕೃತಿ ಮಹಿಳೆಯರಿಗೆ ನೀಡಿದೆ. ಮಹಿಳೆಯರು ಯಾವುದೇ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳವ ಶಕ್ತಿಯನ್ನು ಹೊಂದಿದ್ದಾರೆ. ಮಹಿಳೆಯರನ್ನು ಅಡುಗೆ ಮನೆಗೆ ಸೀಮತಗೊಳಿಸಬಾರದು.
ಅವರು ಇತರೆ ವಿಷಯಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಬೇಕು. ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ವತಃ ನಾನು ಒಂಬತ್ತು ತಿಂಗಳ ಗರ್ಭಿಣಿ ಇದ್ದ ಸಂದರ್ಭದಲ್ಲಿ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದೆ. ಸಾಧನೆ ಮಾಡಲು ಮಹಿಳೆಯರಿಗೆ ಯಾವುದು ಅಡ್ಡಿಯಾಗುವುದಿಲ್ಲ. ನಿರ್ಣಯ ತೆಗದುಕೊಳ್ಳುವ ಸಾಮಾಥ್ರ್ಯ ಮಹಿಳೆಯಿರಿಗೆ ಇದೆ. ಇದನ್ನು ಎಲ್ಲರೂ ಒಪ್ಪಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಅಗಾಧವಾದುದು.
ಗ್ರಾಮೀಣ ಭಾಗದ ಶೇ.80ರಷ್ಟು ಮಹಿಳೆಯರು ಕೃಷಿಯಲ್ಲಿ ಭಾಗಿಯಾಗಿದ್ದಾರೆ. ಕೃಷಿಯಲ್ಲಿನ ಕಠಿಣ ಕೆಲಸಗಳನ್ನು ಮಹಿಳೆಯರು ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರಲ್ಲಿ ನಿಷ್ಠೆ, ಆತ್ಮವಿಶ್ವಾಸ, ಸ್ವಾಭಿಮಾನ ಇದೆ. ಹಾಗಾಗಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್‍ಗಳು ಆರ್ಥಿಕವಾಗಿ ಸಹಾಯ ಮಾಡುತ್ತವೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಕಸ ವಿಂಗಡಣೆಯ ಜವಾಬ್ದಾರಿ ನೀಡುವುದರ ಜೊತೆಗೆ ಮಹಿಳೆಯರಿಗೆ ಕಸ ವಿಂಗಡಣೆಯ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡುತ್ತಿದೆ. 97 ಮಹಿಳೆಯರ ತರಬೇತಿ ಪೂರ್ಣಗೊಂಡಿದ್ದು, ಇನ್ನೂ 31 ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 74 ಮಹಿಳೆಯರು ಕಸ ವಿಂಗಡಣೆಯ ವಾಹನದ ಚಾಲಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಿನಾಚರಣೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ದಿನವಾಗಿದೆ. 1910 ಕ್ಲಾರಾ ಜಟ್ ಮಹಿಳಾ ದಿನಾಚರಣೆಗೆ ಅಡಿಪಾಯ ಹಾಕಿದರು. 1975 ರಲ್ಲಿ ವಿಶ್ವ ಸಂಸ್ಥೆಯಿಂದ ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ ಧ್ಯೇಯ ವ್ಯಾಖ್ಯೆ “ಲಿಂಗಸಮಾನತೆಗಾಗಿ ನಾವಿನ್ಯತೆ ಹಾಗೂ ತಂತ್ರಜ್ಞಾನ” ಎಂಬುದಾಗಿದೆ. ನಾವಿನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದ ಇಷ್ಟೊಂದು ಮುಂದುವರೆದರೂ ಈ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಶೇ.22 ರಷ್ಟು ಮಾತ್ರ ಇದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡುವಲ್ಲಿ ಪ್ರೇರಣೆ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಹಾಗೂ ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳಿಗೆ ಸನ್ಮಾನಿಸಲಾಯಿತು. ಉತ್ತಮ ಸಾಧನೆ ತೋರಿದ ಗ್ರಾಮ ಪಂಚಾಯತಿ ಮಹಿಳಾ ಒಕ್ಕೂಟಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಾಮ ನಿರ್ದೇಶನ ಸದಸ್ಯೆ ರೇಖಾ, ಎನ್‍ಆರ್‍ಎಂಎಲ್ ಯೋಜನಾ ನಿರ್ದೇಶಕ ಕೆ.ಎನ್.ಮಹಾಂತೇಶಪ್ಪ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಕೊಲ್ಲಿ ಲಕ್ಷ್ಮೀ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ.ಶೀಲಾ, ಬಾಲ ನ್ಯಾಯಮಂಡಳಿ ಸದಸ್ಯೆ ಸುಮನ ಅಂಗಡಿ ಸೇರಿದಂತೆ ಮತ್ತಿತರರು ಇದ್ದರು.