ಚಿತ್ರದುರ್ಗ, ಮಾ.8: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಐದು ದಿನ ಉಪವಾಸ ಸತ್ಯಾಗ್ರಹದ ಬಳಿಕ ಕುಸಿದುಬಿದ್ದು ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ವೀರ ಸಂಗೊಳ್ಳಿ ರಾಯಣ್ಣ ಸೇನೆ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ನಗರ ದೇವತೆ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ರೈತನಾಯಕ ಹೆಸರಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಮುಖಂಡರು ಶಕ್ತಿದೇವತೆ ಕೃಪೆ ರೈತಮುಖಂಡನ ಮೇಲಿರಲಿ. ಶೀಘ್ರ ಗುಣಮುಖರಾಗಿ ಕುಡಿಯುವ ನೀರಿನ ಹೋರಾಟದಲ್ಲಿ ಪಾಲ್ಗೊಳ್ಳಲಿ ಎಂದು ಪ್ರಾರ್ಥಿಸಿದರು.
ಸೇನೆ ರಾಜ್ಯಾಧ್ಯಕ್ಷ ಟಿ.ಆನಂದ್ ಮಾತನಾಡಿ, ರಾಜ್ಯದಲ್ಲಿ ಹೋರಾಟದ ಮನಸ್ಸುಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಬರಗಾಲದಿಂದ ತತ್ತರಿಸುವ ಜಿಲ್ಲೆಯ ಜನರ ಬಾಯಾರಿಕೆ ತಣಿಸಲು ಜಿಲ್ಲೆಯ ಜನರಿಗೆ ಭದ್ರೆ ನೀರು ಕೊಡಿ ಎಂದು ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ತಿಪ್ಪೇಸ್ವಾಮಿ ಅಂತಹವರು ಹೋರಾಟಕ್ಕೆ ಅಗತ್ಯವಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಅವರು ಶೀಘ್ರ ಗುಣಮುಖರಾಗಲೆಂದು ಜಿಲ್ಲೆಯ ಜನರೆಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕೆಂದು ಕೋರಿದರು.
ಡಿಸಿ, ಕಚೇರಿ ತಾಲ್ಲೂಕು ಕಚೇರಿ ಸೇರಿ ಯಾವುದೇ ಸರ್ಕಾರಿ ಕಚೇರಿ ಬಳಿ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಟ ನಡೆಸುವವರ ಬಳಿಗೆ ಅಲ್ಲಿನ ಕಚೇರಿಯ ಮುಖ್ಯಸ್ಥರು ಆಗಮಿಸಿ ಮನವಿ ಸ್ವೀಕರಿಸುವ ಪದ್ಧತಿ ಇದೆ. ಆದರೆ, ಚಿತ್ರದುರ್ಗ ಜಿಲ್ಲಾಡಳಿತದ ಕೂದಲೆಳೆ ದೂರದಲ್ಲಿ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸುವ ಬದ್ಧತೆ ಪ್ರದರ್ಶಿಸಿಲ್ಲ. ಇಂತಹ ಜಿಲ್ಲಾಧಿಕಾರಿಯನ್ನು ಶೀಘ್ರದಲ್ಲಿಯೇ ಬೇರೆಡೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಹೋರಾಟಗಾರ ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ ಒಳಗಾಗಲು ಜಿಲ್ಲಾಡಳಿತವೇ ನೇರ ಹೊಣೆ. ಆದ್ದರಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನು ಬೇರೆಡೆ ವರ್ಗಾವಣೆ ಮಾಡದಿದ್ದರೇ ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ. ಜೊತೆಗೆ ಖುದ್ದು ಮುಖ್ಯಮಂತ್ರಿ ಬಳಿಗೆ ದೂರು ಕೊಂಡೊಯ್ಯಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಗಣಿಗಾರಿಕೆ, ಮರಳು ಸಾಗಣೆ ಕಾರ್ಯ ಅಕ್ರಮವಾಗಿ ನಡೆಯುತ್ತಿದೆ. ಭೀಮಸಮುದ್ರ, ಸಾಸಲು ವಿವಿಧೆಡೆ ಗಣಿಲಾರಿಗಳ ಓಡಾಟದಿಂದ ಕೆಂಪು ಧೂಳಿಗೆ ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಲ್ಲಿನ ಜನ ಬೀದಿಗಿಳಿದು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಹೋರಾಟಗಾರರು ಹಾಗೂ ಚಳವಳಿಗಾರರನ್ನೇ ಅಸಡ್ಡೆಯಿಂದ ನೋಡುವ ಜಿಲ್ಲಾಧಿಕಾರಿ ಈ ಜಿಲ್ಲೆಯಿಂದ ನಿರ್ಗಮಿಸಲೇಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.
ರಾಜ್ಯದ ಇತರೆಡೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಯೋಜನೆಗಳ ಪರ ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ, ಹೊಸ ಯೋಜನೆಗಳನ್ನು ತರುತ್ತಿದ್ದಾರೆ. ಆದರೆ, ನಮ್ಮ ಜಿಲ್ಲೆಯ ರಾಜಕಾರಣಿಗಳು ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನು ಮಾಡುತ್ತಿಲ್ಲ. 2009ರಲ್ಲಿ ಆರಂಭಗೊಂಡ ಭದ್ರಾ ಯೋಜನೆ ಪೂರ್ಣಗೊಳಿಸಲು ಇನ್ನೂ ಎಂಟತ್ತು ವರ್ಷ ಬೇಕೆಂಬ ವಿಷಯವೇ ಜನಪ್ರತಿನಿಧಿಗಳ ಅಶಕ್ತತೆಗೆ ಸಾಕ್ಷಿಯಾಗಿದೆ ಎಂದು ಬೇಸರಿಸಿದರು.
ಶಕ್ತಿದೇವತೆ ಉಚ್ಚಂಗಿ ಯಲ್ಲಮ್ಮ ಇಂತಹ ರಾಜಕಾರಣಿಗಳಲ್ಲಿ ಶಕ್ತಿತುಂಬಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಬಳಿ ಧೈರ್ಯದಿಂದ ಮಾತನಾಡಿ ಅನುದಾನ ತರುವಂತ ಬುದ್ದಿ ಕೊಡಲಿ ಎಂದು ಪ್ರಾರ್ಥಿಸಿದರು.
ರೈತಸಂಘದ ಜಗದೀಶ್, ದುಗೇಶ್ ಮಾತನಾಡಿ, ಜಿಲ್ಲೆ ಜನರ ಪರವಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರ ಪರಿಣಾಮ ಈಗ ರೈತಮುಖಂಡ ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ. ಜಿಲ್ಲಾಡಳಿತ ಚಳವಳಿಗಾರನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಈ ಮೂಲಕ ಮಾನವೀಯತೆ ಮೆರೆಯಬೇಕೆಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಸಂಬಂಧ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದು ಹಾಗೂ ತಿಪ್ಪೇಸ್ವಾಮಿ ಚಿಕಿತ್ಸೆ ವೆಚ್ಚ ಜಿಲ್ಲಾಡಳಿತ ಭರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಸಚಿವರು, ಜನಪ್ರತಿನಿಧಿಗಳು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತಿಮ್ಮೆಶ್, ಪ್ರಜ್ವಲ್, ವಿಜಯಕುಮಾರ್ ಇತರರಿದ್ದರು. ಅರ್ಚಕ ವಿಶ್ವನಾಥ್ ಪೂಜಾ ಕಾರ್ಯ ನೆರವೇರಿಸಿಕೊಟ್ಟರು.





