Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ : ಪೊಲೀಸ್ ರಕ್ಷಣೆಯೊಂದಿಗೆ ವೈ-ಜಂಕ್ಷನ್ ಬಳಿ ಕಾಮಗಾರಿ ಕೈಗೊಳ್ಳಿ- ಎ. ನಾರಾಯಣಸ್ವಾಮಿ

Facebook
Twitter
Telegram
WhatsApp

 

ಚಿತ್ರದುರ್ಗ, (ಸೆ. 05):  ಬರಪೀಡಿತ ಪ್ರದೇಶಗಳಿಗೆ ಜೀವನಾಡಿಯಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಬಳಿಯ ವೈ-ಜಂಕ್ಷನ್ ಬಳಿ ಆ ಭಾಗದ ರೈತರ ಗೊಂದಲದ ಕಾರಣದಿಂದಾಗಿ ಕಾಮಗಾರಿ ನಡೆಸಲು ಆಗದಿರುವುದರಿಂದ ಯೋಜನೆ ಪ್ರಗತಿ ಕುಂಠಿತಗೊಂಡಿದೆ.  ಹೀಗಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ರಕ್ಷಣೆ ನೀಡಿ, ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು.  ಇಲ್ಲದಿದ್ದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಂಸದರು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಕುರಿತು ಸೋಮವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಎಂ. ರವಿ ಅವರು ಮಾತನಾಡಿ, ಯೋಜನೆ ಪ್ರಾರಂಭದ ಸ್ಥಳದಿಂದ ಒಟ್ಟು 61 ಕಿ.ಮೀ. ಮಾರ್ಗದಲ್ಲಿ ಒಟ್ಟು 52 ಕಿ.ಮೀ. ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ, 09 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.  ಅಜ್ಜಂಪುರ ಬಳಿಯ ವೈ-ಜಂಕ್ಷನ್ ಕಾಮಗಾರಿಗೆ ಸಂಬಂಧಿಸಿದಂತೆ ಆ ಭಾಗದ ರೈತರ ಅಸಹಕಾರದಿಂದಾಗಿ 1.9 ಕಿ.ಮೀ. ಕಾಮಗಾರಿ ಬಾಕಿ ಉಳಿದಿದ್ದು, ಈ ಪೈಕಿ 0.2 ಕಿ.ಮೀ. ಸಮಸ್ಯೆ ಪರಿಹರಿಸಲಾಗಿದೆ.  ಉಳಿದ 1.7 ಕಿ.ಮೀ. ಕಾಮಗಾರಿಗೆ ಸಂಬಂದಿಸಿದಂತೆ ಭೂಸ್ವಾಧೀನ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದಂತೆ ರೈತರು ಅವಾರ್ಡ್ ನೋಟೀಸ್ ಪಡೆಯದೆ ಕಾಮಗಾರಿ ಪ್ರಾರಂಭಿಸಲು ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಇದು ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಈ ಹಿಂದೆಯೂ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ.  ಭೂಸ್ವಾಧೀನ ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತೆ ಅವಾರ್ಡ್ ಆಗಿದ್ದರೂ, ಆ ಭಾಗದ ರೈತರ ಗೊಂದಲದ ಪರಿಣಾಮವಾಗಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.  ಒಬ್ಬ ಸಂಸದರು ಹಾಗೂ ಕೇಂದ್ರ ಮಂತ್ರಿಯಾಗಿ ನಾನೇ ಖುದ್ದಾಗಿ ಪರಿಶೀಲಿಸಿ, ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಪ್ರಾರಂಭಿಸುವಂತೆ ಈಗಾಗಲೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದಾಗ್ಯೂ, ಕಾಮಗಾರಿ ಪ್ರಾರಂಭಿಸದೇ ಇರುವುದರಿಂದ ಯೋಜನೆ ಕುಂಠಿತಗೊಳ್ಳುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.  ರಾಜ್ಯ ಸರ್ಕಾರದ ನೀರಾವರಿ ಸಚಿವರು, ಗೃಹ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾಮಗಾರಿಯನ್ನು ನಿಗದಿತ 02 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.  ಈ ನಿಟ್ಟಿನಲ್ಲಿ ಚಿತ್ರದುರ್ಗ, ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆ ಸಚಿವರೊಂದಿಗೆ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚನೆ ನೀಡಿದರು.

ಕಾಮಗಾರಿಗಳನ್ನು ಪೂರ್ಣಗೊಳಿಸಿ :
ಯೋಜನೆ ಪ್ರಾರಂಭದ ಸ್ಥಳದಿಂದ ಹೊಸದುರ್ಗ ಭಾಗದವರೆಗಿನ 61 ಕಿ.ಮೀ. ಕಾಲುವೆ ಮಾರ್ಗದಲ್ಲಿ ಅಲ್ಲಲ್ಲಿ ಇನ್ನೂ ಕೆಲವೆಡೆ ಕಾಮಗಾರಿ ಅಪೂರ್ಣವಾಗಿದೆ.  ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ 61.23 ಕಿ.ಮೀ. ನಿಂದ 134.59 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 73.36 ಕಿ.ಮೀ. ಕಾಮಗಾರಿಯ ಪೈಕಿ 39.47 ಕಿ.ಮೀ. ಮಾತ್ರ ಪೂರ್ಣಗೊಂಡಿದೆ.  ಭೂಸ್ವಾಧೀನ ಅವಾರ್ಡ್ ಬಾಕಿ ಇರುವುದರಿಂದ ಉಳಿದಂತೆ ಕಾಮಗಾರಿ ಪೂರ್ಣಗೊಳಿಸಲು ಆಗಿಲ್ಲ.  ಈ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸುಮಾರು 20 ಪ್ರಸ್ತಾವನೆಗಳು ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿವೆ.  ತುಮಕೂರು ಶಾಖಾ ಕಾಲುವೆಯ 108ಕಿ.ಮೀ. ಕಾಮಗಾರಿಯ ಪೈಕಿ ಕೇವಲ 35 ಕಿ.ಮೀ. ಮಾತ್ರ ಪೂರ್ಣಗೊಂಡಿದೆ.  30 ಕಿ.ಮೀ. ಕಾಮಗಾರಿಗೆ ಸಂಬಂಧಿಸಿದಂತೆ ಅವಾರ್ಡ್ ಆಗಿ ಪರಿಹಾರ ಮೊತ್ತ ಪಾವತಿಯಾಗಿದೆ.  ಇನ್ನೂ 15 ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಸಿದ್ದು,  ಅನುಮೋದನೆ ಬಾಕಿ ಇದೆ.  ಇದೇ ರೀತಿ ಭದ್ರಾ  ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಸ್ತಾವನೆಗಳ ಇತ್ಯರ್ಥಕ್ಕೆ ರಾಜ್ಯ ಮಟ್ಟದ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಹಾಗೂ ಎಲ್ಲ ವಿಶೇಷ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರೆ ಭರ್ತಿ ಕಾಮಗಾರಿಗಳ ಪರಿಶೀಲನೆ :
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ವ್ಯಾಪ್ತಿಯಲ್ಲಿ ಬರುವ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳ ವಿವಿಧ ಕೆರೆಗಳನ್ನು ಭರ್ತಿ ಮಾಡುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.  ಕೆರೆಗಳ ಭರ್ತಿ ಮಾಡುವ ಕಾಮಗಾರಿಗಳ ಪೈಕಿ ಪೈಪ್‍ಲೈನ್ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಕುರಿತಂತೆ ಶೀಘ್ರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಸಂಸದರು ಹೇಳಿದರು.

ವೇದಾವತಿ ನದಿಪಾತ್ರದಲ್ಲಿ ಮುಂಜಾಗ್ರತೆಗೆ ಸೂಚನೆ :
ವಾಣಿ ವಿಲಾಸ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.  ಹೀಗಾಗಿ ನದಿ ಪಾತ್ರದಲ್ಲಿ ಕೆಳಭಾಗದಲ್ಲಿ ಬರುವ ಗ್ರಾಮಗಳ ಜನರಿಗೆ ಯಾವುದೇ ತೊಂದರೆಯಾಗದಂತೆ ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಚಳ್ಳಕೆರೆ ತಾಲ್ಲೂಕು ಮಹದೇವಪುರ ಗ್ರಾಮದಲ್ಲಿ ನೀರು ನುಗ್ಗಿ ಜನರು ತೊಂದರೆ ಎದುರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ.  ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಹೆಚ್ಚು ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ, ಅಧಿಕಾರಿಗಳು ಕಟ್ಟೆಚ್ಚರ ವಹಿಸುವುದು ಅಗತ್ಯವಿದೆ.  ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಪ್ರಸಂಗ ಎದುರಾದಲ್ಲಿ, ತೊಂದರೆಗೆ ಸಿಲುಕಲಿರುವ ಗ್ರಾಮಗಳ ಬಗ್ಗೆ ತಹಸಿಲ್ದಾರರು ಹಾಗೂ ಸಂಬಂಧಪಟ್ಟ ಇಂಜಿನಿಯರ್‍ಗಳು ಜಂಟಿಸಮೀಕ್ಷೆ ಕೈಗೊಂಡು, ಕೂಡಲೆ ವರದಿ ಸಲ್ಲಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು, ಈಗಾಗಲೆ ನದಿ ಪಾತ್ರದ ಗ್ರಾಮಗಳಲ್ಲಿ ಜನರು ಎಚ್ಚರಿಕೆ ವಹಿಸುವಂತೆ ಡಂಗುರ ಸಾರಲಾಗಿದೆ. ಅಲ್ಲದೆ ಕರಪತ್ರ ಹಂಚಿಕೆ ಹಾಗೂ ಪ್ರಕಟಣೆ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಎಂ. ರವಿ, ಅಧೀಕ್ಷಕ ಅಭಿಯಂತರರಾದ ಎಫ್.ಹೆಚ್. ಲಮಾಣಿ, ಶಿವಪ್ರಕಾಶ್, ಕಾರ್ಯಪಾಲಕ ಅಭಿಯಂತರ ಚಂದ್ರಮೌಳಿ, ಉಪವಿಭಾಗಾಧಿಕಾರಿ ಚಂದ್ರಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿವಿಧ ಇಂಜಿನಿಯರ್‍ಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!