ಚಿತ್ರದುರ್ಗ, (ಫೆಬ್ರವರಿ.22) : ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಂಡ ರೈತರಿಗೆ ಭೂಮಿಯ ಪರಿಹಾರದ ಜತೆಗೆ ಪ್ರತ್ಯೇಕವಾಗಿ ರೂ.5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸಮುದಾಯಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಿಸಲು ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‍ಗಳಲ್ಲಿ 6 ಎಕೆರೆ 15 ಗುಂಟೆ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲು ರಚಿಸಿರುವ ಆರ್‍ಆರ್ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡಕಿಟ್ಟದಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಯಾವ ರೈತರೂ ಶೇ.50ಕ್ಕಿಂತ ಹೆಚ್ಚು ಭೂಮಿಯನ್ನು ಕಳೆದುಕೊಂಡಿಲ್ಲ ಎಂಬ ವರದಿಯನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಂಬಂಧ ಯಾವುದಾದರೂ ಸಮಸ್ಯೆಗಳು ಹಾಗೂ ದೂರುಗಳಿದ್ದಲ್ಲಿ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸೂಕ್ತವಾದ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ವಿಶೇಷ ಭೂ ಸ್ವಾಧೀನಾಧಿಕಾರಿಗಳು ಭೂ ಸ್ವಾಧೀನ ಮಾಡುತ್ತಾರೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಅವರ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ಮಾಡಬೇಕು. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಪರಿಶೀಲಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಶಿಲ್ಪಾ ಮಾತನಾಡಿ, ಸರ್ಕಾರಿ ಜಮೀನುಗಳಿಗೆ ಪರಿಹಾರ ಸಿಗುತ್ತಿಲ್ಲ ಎಂಬ ರೈತರ ಸಮಸ್ಯೆಗೆ ಖಂಡಿತವಾಗಿ ಪರಿಹಾರವಿದೆ. ಪೋಡಿ ವ್ಯವಸ್ಥೆ ಯಾರ ಹೆಸರಿಗೆ ಆಗುತ್ತದೆ ಅವರಿಗೆ ಹಣವನ್ನು ನೀಡಲಾಗುತ್ತದೆ. ಆದ್ದರಿಂದ ಅಂತಹ ರೈತರ ಹಣ ಭೂ ಸ್ವಾಧೀನ ಅಧಿಕಾರಿಗಳ ಖಾತೆಯಲ್ಲಿ ಅಥವಾ ಕೋರ್ಟ್ ಡೆಪಾಸಿಟ್‍ನಲ್ಲಿ ಹಣವನ್ನು ಇಡಲಾಗುತ್ತದೆ ಎಂದರು.
ಸರ್ಕಾರಿ ಜಮೀನಿನ ಪೋಡಿ ದುರಸ್ಥಿಯ ಕೆಲಸ ಸ್ಪಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪೋಡಿಯಾದ ತಕ್ಷಣ ಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡಿದಂತಹ ರೈತರಿಗೆ ಹಣ ನೀಡಲಾಗುತ್ತದೆ. ರೈತರು ಪೋಡಿ ದುರಸ್ಥಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅದರ ಬಗ್ಗೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ. ಕೆಂಚನಹಳ್ಳಿ ಸರ್ವೇ ನಂಬರ್ 6ಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವರದಿಯನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ದೊಡ್ಡಕಿಟ್ಟದಹಳ್ಳಿಯ ಸರ್ವೇ ನಂಬರ್‍ಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ವರದಿ ಕೇಳಿ ಪಡೆಯುತ್ತೇವೆ. ಬಳಿಕ ಪೋಡಿ ದುರಸ್ಥಿಯಾದ ನಂತರ ಭೂ ಪರಿಹಾರ ಹಣವನ್ನು ನೀಡಲು ಅವಕಾಶವಿರುತ್ತದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಮೌಳಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ 61.230 ರಿಂದ 63.523 ಕಿಮೀ ವರೆಗೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ದೊಡ್ಡಕಿಟ್ಟದಹಳ್ಳಿ ಗ್ರಾಮದ ಮುಖಾಂತರ ಹಾದು ಹೋಗುತ್ತದೆ. ಈ ಕಾಲುವೆಯ ನಿರ್ಮಾಣಕ್ಕಾಗಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ಸರ್ವೆ ನಂಬರ್ 71,72,73,74 ಮತ್ತು 75 ರ ಜಮೀನುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ದೊಡ್ಡಕಿಟ್ಟದಹಳ್ಳಿ ಗ್ರಾಮದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಒಳಪಡುತ್ತಿರುವ ಜಮೀನುಗಳನ್ನು ಗುರುತಿಸಿ ಕಂದಾಯ ಇಲಾಖೆಯವರ ಸಹಯೋಗದೊಂದಿಗೆ ತಾಲ್ಲೂಕು ಸರ್ವೆಯರವರಿಂದ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ಒಟ್ಟು 6 ಎಕರೆ 15 ಗುಂಟೆ ಸರ್ವೆ ಮಾಡಿಸಿ 2021 ಮಾರ್ಚ್ 26 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಎಲ್ಲಾ ರೈತರುಗಳಿಗೆ 11(1) ಅಧಿಸೂಚನೆಯ ನೋಟೀಸ್ ಅನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಭೂಸ್ವಾಧೀನಕ್ಕೆ ಒಳಪಡುವ ಮರ, ಮಾಲ್ಕಿ, ಕಟ್ಟಡ, ಕೊಳವೆ ಬಾವಿ, ಪೈಪ್‍ಲೈನ್ ಇತ್ಯಾದಿಗಳ ಅಳತೆ ಮಾಡಲು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳೊಂದಿಗೆ ಜಂಟಿ ಮೋಜಣಿಯನ್ನು 2021ರ ಅಕ್ಟೋಬರ್ 13ರಂದು ಕೈಗೊಳ್ಳಲಾಯಿತು.
ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರೆಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ, ಬೆಂಗಳೂರು ಇವರಿಂದ 15(3)ರಡಿ ಅನುಮತಿಯನ್ನು ಪಡೆದುಕೊಳ್ಳಲಾಗಿದೆ.
ಸರ್ವೇ ಇಲಾಖೆಯಿಂದ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ಸರ್ವೆ ನಕ್ಷೆಯನ್ನು ತಯಾರಿಸಿ ಹಾಗೂ ಬಾದಿತ ಕುಟುಂಬಗಳ ಸಮೀಕ್ಷೆ ಕೈಗೊಂಡು ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಆರ್ ಮತ್ತು ಆರ್ ಹಾಗೂ 19(1) ಪ್ರಸ್ತಾವನೆ ಸಲ್ಲಿಸಲಾಗಿದೆ.
ನಂತರ ಪುನರ್ ವಸತಿ ಹಾಗೂ ಪುನರ್ ವ್ಯವಸ್ಥೆಯನ್ನು ಕೈಗೊಳ್ಳಲು ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಮೇಲ್ವಿಚಾರಣಾ ಸಮಿತಿಗೆ ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಳ್ಳಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾದೀನಾಧಿಕಾರಿ ಇಂಜಿನಿಯರ್‍ಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ರೈತರು ಇದ್ದರು.