ಚಿತ್ರದುರ್ಗ, (ಫೆ.19) : ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಇದ್ದ ತೊಡಕುಗಳು, ಆಂಧ್ರ ಸರ್ಕಾರ ತೆಗೆದಿದ್ದ ತಕರಾರುಗಳನ್ನು ಕೇಂದ್ರ ಸರ್ಕಾರದ ಹೈಪವರ್ ಸಮಿತಿ ಸಂಪೂರ್ಣವಾಗಿ ತಿರಸ್ಕರಿಸಿದೆ.
ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನವಾಗುವುದು ಮಾತ್ರ ಬಾಕಿ ಇದ್ದು ಕೇಂದ್ರ ಸರ್ಕಾರ ಸಂಪುಟದಲ್ಲಿ ಅನುಮೋದಿಸಿದರೆ ರಾಷ್ಟ್ರೀಯ ಜಲ ಯೋಜನೆಯಾಗಿ ರೂಪಗೊಳ್ಳಲಿದೆ ಇದೊಂದು ಅತ್ಯಂತ ಮಹತ್ವದ ಯೋಜನೆಯಾಗಿದೆ ಎಂದು ಸಚಿವ ನಾರಾಯಣಸ್ವಾಮಿ ಹೇಳಿದರು.
ಜಿಪಂ ಮಿನಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಜ್ಜಂಪುರ ಸಮೀಪದ ವೈ-ಜೆಕ್ಷನ್ ಸಮೀಪದಲ್ಲಿ ಕಾಲುವೆ ನಿರ್ಮಾಣದಲ್ಲಿ ತೊಡಕಾಗಿದೆ. ರೈತರ ಮನವೊಲಿಕೆ ಕಾರ್ಯ ಮುಂದುವರೆದಿದೆ. ಈ ವರ್ಷದ ಮಾರ್ಚ್-ಅಂತ್ಯಕ್ಕೆ ಎಲ್ಲಾ ರೀತಿಯ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಈ ಸಮಸ್ಯೆ ನಿವಾರಣೆಯಾದರೆ ಇಡೀ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಂತೆ ಆಗಲಿದೆ ಎಂದು ತಿಳಿಸಿದರು.
ಎತ್ತಿನಹೊಳೆಯಿಂದ ವಿವಿ ಸಾಗರಕ್ಕೆ ನೀರು- ಹಳೆ ಮೈಸೂರು ಭಾಗದ 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಯೋಜನೆಯಿಂದಲೂ 4-5 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ ಹರಿಸುವ ಉದ್ದೇಶವಿದೆ. ಎತ್ತಿನಹೊಳೆ ನೀರು ಸಂಗ್ರಹ ಮಾಡಿ ಇಲ್ಲಿಂದ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶವೂ ಇದೆ. ಎತ್ತಿನಹೊಳೆ ಕಾಮಗಾರಿ ಪೂರ್ಣವಾಗುವ ತನಕ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತದೆ. ಮುಂದಿನ ಜೂನ್ ವೇಳೆಗೆ ಎತ್ತಿನಹೊಳೆ ನೀರು ವಿವಿ ಸಾಗರಕ್ಕೆ ಹರಿಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
125 ಕೋಟಿ ರೂ.ನಲ್ಲಿ ಹುಳಿಯಾರು-ಹಿರಿಯೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 170 ಕೋಟಿ ರೂ.ನಲ್ಲಿ ಹೊಳಲ್ಕೆರೆ-ಹೊಸದುರ್ಗ ಹೆದ್ದಾರಿ ನಿರ್ಮಾಣ ಕಾರ್ಯ ಟೆಂಡರ್ ಹಂತದಲ್ಲಿದ್ದು ಶೀಘ್ರ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಚಿತ್ರದುರ್ಗ ಜಿಲ್ಲೆಗೆ ಎರಡು ಮಹತ್ವದ ಹೆದ್ದಾರಿಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿ ಟೆಂಡರ್ ಕರೆದಿದೆ
ನೇರ ರೈಲು ಮಾರ್ಗ- ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಗೆ ಚುರುಕು ನೀಡಲಾಗುತ್ತದೆ. ಈ ಯೋಜನೆಯಲ್ಲಿನ ಭೂ ಸ್ವಾಧೀನಕ್ಕೆ 700 ಕೋಟಿ ರೂ.ಗಳ ಅಗತ್ಯವಿದೆ. ಹಾಲಿ 53 ಕೋಟಿ ರೂ.ಗಳಿದ್ದು ಈ ಹಣ ಖರ್ಚಾದ ಮೇಲೆ 50 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಇದರ ಜೊತೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತರಲಾಗುತ್ತದೆ. ಕಾಮಗಾರಿ ವಿಳಂಬವಾಗದಂತೆ ಎಚ್ಚರವಹಿಸಲಾಗುತ್ತದೆ ಎಂದು ತಿಳಿಸಿದರು.