ಭದ್ರಾ ಮೇಲ್ದಂಡೆ ಯೋಜನೆ | ಕಾಮಗಾರಿಗೆ ರೈತರು ಅನುವುಮಾಡಿ ಕೊಡಿ : ಡಿಸಿಎಂ ಡಿಕೆಶಿ ಮನವಿ

suddionenews
2 Min Read

ಚಿತ್ರದುರ್ಗ ಮಾ. 04 : ಲಕ್ಷಾಂತರ ರೈತರ‌ ಆಶಾ ಕಿರಣವಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಯಡಿ ಕೆಲವೇ ಕೆಲವು ರೈತರಿಂದಾಗಿ ಇಡೀ ಯೋಜನೆ ನೆನೆಗುದಿಗೆ ಬಿದ್ದಿದೆ‌. ರೈತರಿಗಾಗಿಯೇ ಇರುವ ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೈತರು ಹಠ ಬಿಟ್ಟು ಕೆಲಸ ಮಾಡಲು ಅನುವು ಮಾಡಿ ಕೊಡಬೇಕು. ಪರಿಹಾರ ಕುರಿತಂತೆ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಭರವಸೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಅಬ್ಬಿನಹೊಳಲು ಗ್ರಾಮದ ಬಳಿ‌ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಬಳಿಕ ಇಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಿದರು.
ರೈತರು ಮಾತನಾಡಿ, ಪರಿಹಾರ ವಿಚಾರದಲ್ಲಿ ಅಬ್ಬಿನಹೊಳಲು, ನರಸೀಪುರ ಮತ್ತಿತರ ಗ್ರಾಮದ ರೈತರಿಗೆ ಅನ್ಯಾಯವಾಗಿದೆ, ಕೆಲ ರೈತರಿಗೆ 40 ಲಕ್ಷ ಪರಿಹಾರ ನೀಡಿದರೆ, ನಮಗೆ ಮಾತ್ರ ಕೇವಲ 4 ಲಕ್ಷ ನೀಡಿದ್ದಾರೆ, ಒದು ತೀರಾ ತಾರತಮ್ಯ ಮತ್ತು ಅನ್ಯಾಯ . ನಮಗೆ ಏಕರೂಪವಾಗಿ ಕನಿಷ್ಟ 40 ಲಕ್ಷ ಪರಿಹಾರ ನೀಡುವಂತೆ ಮನವಿ ಮಾಡಿದರು.

ವಿ.ಜೆ.ಎನ್.ಎಲ್. ವ್ಯವಸ್ಥಾಪಕ‌ ನಿರ್ದೇಶಕ ಸಣ್ಣ ಚಿತ್ತಯ್ಯ ಮಾತನಾಡಿ, ಅಬ್ಬಿನಹೊಳಲು ಬಳಿಯ 33 ರೈತರ ಪೈಕಿ 23 ರೈತರು ಪರಿಹಾರ ಮೊತ್ತ ಹೆಚ್ಚಳ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೈತರಿಗೆ ಅವಾರ್ಡ್ ಮೊತ್ತವನ್ನು ನ್ಯಾಯಾಲಯಕ್ಕೆ ಜಮಾ‌ ಮಾಡಲಾಗಿದೆ. ಇಲ್ಲಿನ 1.7 km ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟರೆ ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ ವೇಳೆಗೆ ಪ್ರಾಯೋಗಿಕ ವಾಗಿ ನೀರು ಹರಿಸುವ ಪರೀಕ್ಷೆ ನಡೆಸಲಾಗುವುದು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.‌ ಶಿವಕುಮಾರ್ ಮಾತನಾಡಿ 21 ಸಾವಿರ ಕೋಟಿ ಮೊತ್ತದ ಬೃಹತ್ ಯೋಜನೆ ಹಾಗೂ ಲಕ್ಷಾಂತರ ರೈತರ ಆಶಾಕಿರಣವಾದ ಈ ಭದ್ರಾ ಮೇಲ್ದಂಡೆ ಯೋಜನೆಯು ಕೆಲವೇ ಕೆಲವು ರೈತರಿಂದ ನೆನೆಗುದಿಗೆ ಬೀಳುವಿದು ಸರಿಯಲ್ಲ. ರೈತರಿಗೆ ಆಗಿರುವ ತಾರತಮ್ಯದ ಬಗ್ಗೆ ನನ್ನ‌ ಗಮನಕ್ಕೆ ಬಂದಿದೆ. ಕಾನೂನು ಚೌಕಟ್ಟಿನಲ್ಲಿ ರೈತರ ಸಮಸ್ಯೆ ಪರಿಹರಿಸಲಾಗುದು. ಕಾಲ ಕಳೆದಂತೆ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ಶೀಘ್ರ ಇತ್ಯರ್ಥ ಮಾಡುವುದು ಸೂಕ್ತ. ಚುನಾವಣೆ ಘೋಷಣೆಗೂ ಮುನ್ನವೇ ಬೆಂಗಳೂರಿನಲ್ಲಿ ಸಂಬಂಧಿಸಿದ ಎಲ್ಲ ಶಾಸಕರು, ರೈತರು, ವಿಜೆಎನ್ ಎಲ್ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳೊಂದೊಗೆ ಸಭೆ ನಡೆಸಿ ಒಂದು ಒಳ್ಳೆಯ ನಿರ್ಧಾರ ಮಾಡೋಣ. ಹೀಗಾಗಿ ರೈತರು ಹಠ ಬಿಟ್ಟು ಕೂಡಲೆ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರುಗಳಾದ ರಘುಮೂರ್ತಿ, ಬಿ..ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಚಂದ್ರಪ್ಪ, ವೀರೇಂದ್ರ ಪಪ್ಪಿ, ಶಿರಾ ಶಾಸಕ ಟಿ.ಬಿ. ಜಯಚಂದ್ರ, ತರೀಕೆರೆ ಶಾಸಕ ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್, ಕಡೂರು ಶಾಸಕ ಆನಂದ್,‌ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಶೃಂಗೇರಿ ಶಾಸಕ ರಾಜೇಗೌಡ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಶಿವಪ್ರಕಾಶ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್ , ಮಾಜಿ ಸಂಸದ ಬಿ.ಎಂ.‌ಚಂದ್ರಪ್ಪ ಮುಂತಾದ ಗಣ್ಯರು, ಅಧಿಕಾರಿಗಳು ಇದ್ದರು

Share This Article
Leave a Comment

Leave a Reply

Your email address will not be published. Required fields are marked *