ಬೆಂಗಳೂರು: ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಫೇಸ್ ಬುಕ್ ಲೈವ್ ನಲ್ಲಿ ಊರಿದ್ದ ಕಡೆ ಹೊಲಗೇರಿ ಇದ್ದೆ ಇರುತ್ತೆ ಎಂಬ ಗಾದೆ ಮಾತು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ. ಸದ್ಯ ಉಪೇಂದ್ರ ಅವರು ಉತ್ತರಿಸಬೇಕಿದೆ. ಆದರೆ ಅವರ ಸುಳಿವೇ ಇಲ್ಲ.
ಕತ್ರುಗುಪ್ಪೆ ಹಾಗೂ ಸದಾಶಿವನಗರದ ಮನೆಗೆ ನೋಟೀಸ್ ನೀಡಲಾಗಿದೆ. ಚೆನ್ನಮ್ಮಅಚ್ಚುಕಟ್ಟೆ ಪೊಲೀಸರು ಕೂಡ ಉಪೇಂದ್ರ ಅವರ ಹುಡುಕಾಟದಲ್ಲಿದ್ದಾರೆ. ಇಂದು ಬೆಳಗ್ಗೆ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಆದ್ರೆ ಉಪೇಂದ್ರ ಅವರು ನೋಟೀಸ್ ಗೂ ಉತ್ತರಿಸದೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಉಪೇಂದ್ರ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದು. ಅವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಿದೆ. ಅಟ್ರಾಸಿಟಿ ಸೆಕ್ಷನ್ 3(1) (r) (s) ಅಡಿ ಕೇಸ್ ದಾಖಲಾಗಿದೆ. ಇದರಲ್ಲಿ ಸೆಕ್ಷನ್ 3(1) ದಲಿತನಲ್ಲದ ವ್ಯಕ್ತಿಯಿಂದ ದಲಿತರಿಗೆ ನಿಂದನೆ ಆರೋಪವಿದೆ. 3(1)(r)- ಉದ್ದೇಶ ಪೂರ್ವಕವಾಗಿ ಸಾರ್ವಜನಿಕವಾಗಿ ನಿಂದನೆ, 3(1)(r)(s) ಸಾರ್ವಜನಿಕರಿಗೆ ತಿಳಿಯುವ ಉದ್ದೇಶದಿಂದ ನಿಂದನೆ ಕೇಸ್ ಹಾಕಲಾಗಿದೆ.
ಈ ಪ್ರಕರಣದಲ್ಲಿ 6 ತಿಂಗಳಿನಿಂದ 5 ವರ್ಷದ ತನಕ ಜೈಲು ಶಿಕ್ಷೆ & ದಂಡ ವಿಧಿಸುವ ಸಾಧ್ಯತೆಯಿದೆ. ಐಪಿಸಿ ಸೆಕ್ಷನ್ 505(1)(c) ಪ್ರಕಾರ ಧರ್ಮ, ಜನಾಂಗದ ಬಗ್ಗೆ ತಪ್ಪಾಗಿ ಹೇಳಿಕೆ ಪಬ್ಲಿಷ್ ಮಾಡುವುದು ಅಪರಾಧವಾಗಿದೆ. ಇದರಲ್ಲಿ 3 ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ. IPC 153A- ಜಾತಿ ಧರ್ಮಗಳ ನಡುವೆ ದ್ವೇಷ ಬಿತ್ತುವುದು ಸೇರಿದೆ. ಇದರ ಪ್ರಕಾರ 5 ವರ್ಷದ ಜೈಲು ಶಿಕ್ಷೆ & ದಂಡ ವಿಧಿಸಬಹುದು.