ಲಕ್ನೋ: ಉತ್ತರ ಪ್ರದೇಶದ ರಾಜಕೀಯ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ನಾಯಕರ ಪಕ್ಷಾಂತರ ಪರ್ವ ಮುಂದುವರಿದಿದೆ.
ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಎಸ್‌ಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧಿ ಮಾಜಿ ಶಾಸಕ ಪ್ರಮೋದ್ ಗುಪ್ತಾ ಗುರುವಾರ ಬಿಜೆಪಿ ಸೇರಿದ್ದಾರೆ.
ಬುಧವಾರ ಮುಲಾಯಂ ಸಿಂಗ್ ಯಾದವ್ ಸೊಸೆ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪ್ರಮೋದ್ ಗುಪ್ತಾ ಜೊತೆಗೆ ಮಾಜಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿ ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ, ಪ್ರಿಯಾಂಕಾ ಮೌರ್ಯ ಪೋಸ್ಟರ್ ಗರ್ಲ್ ಆಗಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಾಂಗ್ರೆಸ್ ಪಕ್ಷವು ಪ್ರಾರಂಭಿಸಿದ ‘ಲಡ್ಕಿ ಹೂ, ಲಡ್ ಶಕ್ತಿ ಹೂ’ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಮೂವರು ಸಚಿವರು ಸೇರಿದಂತೆ ಹಲವು ಶಾಸಕರು ಬಿಜೆಪಿ ಪಕ್ಷ ತೊರೆದಿದ್ದು, ಒಬಿಸಿ ವಲಯದಲ್ಲಿ ಸಂಕಷ್ಟದಲ್ಲಿರುವ ಬಿಜೆಪಿಗೆ ಮುಲಾಯಂ ಅವರ ಕಿರಿಯ ಸೊಸೆ ಮತ್ತು ಸಂಬಂಧಿ ಬಿಜೆಪಿ ಸೇರಿರುವುದು ಕೊಂಚ ಸಮಾಧಾನ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.