ಲಕ್ನೋ : ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ಕಾವೇರುತ್ತಿವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ರಾಜಕೀಯಬೆಳವಣಿಗೆಗಳು ವೇಗವಾಗಿ ಬದಲಾಗುತ್ತಿವೆ.
ಉತ್ತರ ಪ್ರದೇಶದಲ್ಲಿ ಮುಲಾಯಂ ಕುಟುಂಬಕ್ಕೆ ಬಾರಿ ಆಘಾತ ಎದುರಾಗಿದೆ. ಮುಲಾಯಂ ಸಿಂಗ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬುಧವಾರ ಬಿಜೆಪಿ ಸೇರಿದ್ದಾರೆ.
ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಛೇರಿಯಲ್ಲಿ ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರದೇವ್ ಸಿಂಗ್ ಅವರ ಸಮ್ಮುಖದಲ್ಲಿ ಅಪರ್ಣಾ ಯಾದವ್ ಬಿಜೆಪಿ ಪಕ್ಷಕ್ಕೆ ಸೇರಿದರು.
ವಾಸ್ತವವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಅಪರ್ಣಾ ಪಕ್ಷಕ್ಕೆ ಸೇರಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ಕೆಲ ವರ್ಷಗಳಿಂದ ಅಪರ್ಣಾ ಜೊತೆ ಸಂಪರ್ಕದಲ್ಲಿದ್ದ ಬಿಜೆಪಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಈ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಶಾಕ್ ನೀಡಿದೆ.
ಮೂವರು ಒಬಿಸಿ ಸಚಿವರು ಮತ್ತು ಏಳು ಶಾಸಕರನ್ನು ಸಮಾಜವಾದಿ ಪಕ್ಷಕ್ಕೆ ಬರಮಾಡಿಕೊಂಡ ಸಮಾಜವಾದಿ ಪಕ್ಷಕ್ಕೆ ಬಿಜೆಪಿ ರಿವರ್ಸ್ ಪಂಚ್ ನೀಡಿದೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಮಗ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪರ್ಣಾ ಅವರು ಸಮಾಜವಾದಿ ಪಕ್ಷದ ಪರವಾಗಿ ಲಕದ್ನೋದಿಂದ ಸ್ಪರ್ಧಿಸಿ ಸೋತಿದ್ದರು. ಈಗ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ಠಾಕೂರ್ ಬಿಷ್ಟ್ ಸಮುದಾಯದವರಾದ ಅಪರ್ಣಾ ಯಾದವ್ ಅವರು ಪ್ರಧಾನಿ ಮೋದಿಯವರ ನೀತಿಗಳ ಬಗ್ಗೆ ಮೊದಲಿನಿಂದಲೂ ಸಕಾರಾತ್ಮಕವಾಗಿಯೇ ಇದ್ದಾರೆ. ಎಸ್ಪಿಯಲ್ಲಿ ತನಗೆ ಸಾಕಷ್ಟು ಪ್ರಾಧಾನ್ಯತೆ ಸಿಗಲಿಲ್ಲ ಎಂಬ ಭಾವನೆಯಿಂದ ಅಪರ್ಣಾ ಬಿಜೆಪಿ ಸೇರಿದ್ದಾರೆ.