ಹಾಸನ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಜನರ ಆತಂಕಕ್ಕೆ ಕಾರಣವಾಗಿದೆ. ಒಂದಲ್ಲ ಎರಡಲ್ಲ ಒಂದೇ ತಿಂಗಳಲ್ಲಿ ಹೃದಯಾಘಾತದಿಂದ 15 ಮಂದಿ ಸಾವನ್ನಪ್ಪಿದ್ದಾರೆ. ಇಂದು ಕೂಡ ಅದೇ ಹೃದಯಾಘಾತಕ್ಕೆ ಒಬ್ಬರು ಬಲಿಯಾಗಿದ್ದು, ಈ ಮೂಲಕ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 16ಕ್ಕೆ ದಾಟಿದೆ.
37 ವರ್ಷದ ಗೋವಿಂದ ಎಂಬಾತ ಇಂದು ಹಾರ್ಟ್ ಅಟ್ಯಾಕ್ ಸಾವನ್ನಪ್ಪಿದ್ದಾರೆ. ಈತ ಸಿದ್ದೇಶ್ವರ ನಗರದ ನಿವಾಸಿಯಾಗಿದ್ದ. ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ. ಆಟೋ ಚಲಾಯಿಸುತ್ತಿರುವಾಗಲೇ ಇಂಥದ್ದೊಂದು ದುರ್ಘಟನೆ ನಡೆದಿದೆ. ಗೋವಿಂದು, ಆಟೋ ಓಡಿಸುತ್ತಿದ್ದಾಗ ಎದೆ ನೋವು ಬಂದಿದೆ. ತಕ್ಷಣ ಅವರೇ ಆಟೋ ಓಡಿಸಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ವಿಧಿ ಕಡೆಗೂ ಅವರ ಬದುಕಲ್ಲಿ ಆಟವಾಡಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಜನಕ್ಕೆ ಇದೊಂತರ ಉತ್ತರ ಸಿಗದ ಪ್ರಶ್ನೆಯಾಗಿ ಕಾಡುತ್ತಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ಜನ ಅದು ಹಾರ್ಟ್ ಅಟ್ಯಾಕ್ ನಿಂದಾನೇ ಸಾಯುವುದಕ್ಕೆ ಕಾರಣವಾದರೂ ಏನು ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಒಬ್ಬೊಬ್ಬರೇ ಸಾಯ್ತಾ ಇದ್ರೆ ಹೇಗೆ ಎಂಬ ಭಯವೂ ಅವರನ್ನ ಕಾಡುತ್ತಿದೆ. ಮೇ ಹಾಗೂ ಜೂನ್ ತಿಂಗಳಿನಿಂದ ಒಂದೇ ಸಮನೆ ಹಾರ್ಟ್ ಅಟ್ಯಾಕ್ ಆಗ್ತಾ ಇದೆ. ಈಗ ಗೋವಿಂದು ಸಾವನ್ನಪ್ಪಿದ್ದಾರೆ. ಆಟೋ ಓಡಿಸಿಕೊಂಡು ಹೇಗೋ ಜೀವನ ಮಾಡ್ತಾ ಇದ್ದರು. ಆದರೆ ಈಗ ಅವರ ಮನೆಯವರಿಗೆ ಆಸರೆ ಯಾರು ಎಂಬಂತಾಗಿದೆ. ಗೋವಿಂದು ಸಾವಿನಿಂದ ಇಡೀ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಗೋವಿಂದು ಶವದ ಮುಂದೆ ಮನೆಯವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಆ ಸಂಕಟ ನೋಡಿ ಗ್ರಾಮದವರು ಕಣ್ಣೀರಾಗಿದ್ದಾರೆ.






