“ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಚಾಲನೆ : ಈ ಅಭಿಯಾನದ ಉದ್ದೇಶವೇನು ? ‌

2 Min Read

ಚಿತ್ರದುರ್ಗ .11: “ನನ್ನ ಮಣ್ಣು ನನ್ನ ದೇಶ” ದೇಶದ ಭಕ್ತಿಯನ್ನು ದೇಶದ ಮೂಲೆಮೂಲೆಗೆ ಪಸರಿಸುವ ಕಾರ್ಯಕ್ರಮ ಇದಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಹಾಗೂ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇಗುಲದಲ್ಲಿ ಸೋಮವಾರ ಪೂಜೆ ಸಲ್ಲಿಸಿ, “ನನ್ನ ಮಣ್ಣು ನನ್ನ ದೇಶ” ಅಭಿಯಾನಕ್ಕೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ “ನನ್ನ ಮಣ್ಣು ನನ್ನ ದೇಶ” ಪರಿಕಲ್ಪನೆಯಲ್ಲಿ  ದೇಶದ ಭಕ್ತಿಯನ್ನು ದೇಶದ ಮೂಲೆಮೂಲೆಗೆ ಪಸರಿಸಬೇಕು.

ಯುವ ಪೀಳಿಗೆಗೆ ದೇಶದ ಮಣ್ಣಿನ ಸತ್ವವನ್ನೂ ಪ್ರತಿ ಮನೆಗೆ, ಯುವಶಕ್ತಿಗೆ ತಲುಪಿಸಬೇಕು ಎಂಬುದು ಮೋದಿಯವರ ಕನಸು. ಇದರ ಜೊತೆ ಜೊತೆಗೆ ದೇಶದ ಸೇನಾನಿಗಳು, ದೇಶದ ಸೈನಿಕರು ದೇಶಕ್ಕೆ ಮಾಡಿದ ತ್ಯಾಗವನ್ನು, ಸ್ವಾತಂತ್ರ್ಯ ಹೋರಾಟ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ, ಸೇನಾನಿಗಳ ಸಮರ್ಪಣಾಭಾವಕ್ಕಾಗಿ, ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯಲ್ಲಿ “ಅಮೃತ ವನ” ನಿರ್ಮಿಸಲಾಗುತ್ತಿದೆ. ಗೌರವಯುತವಾಗಿ ದೇಶದ ಪ್ರತಿ ಮೂಲೆಯ ಭೂತಾಯಿ ಮಣ್ಣನ್ನು ತರಿಸಿ ಉದ್ಯಾನ ನಿರ್ಮಾಣ ಮಾಡಿ ವಿಶ್ವಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.

ದೇಶದ ರಕ್ಷಣೆಯಲ್ಲಿ ಭಾಗವಹಿಸಿದ ಸೇನಾನಿಗಳು, ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟರಿ ಸೇರಿದಂತೆ  ಇಡೀ ಜಿಲ್ಲೆಯ ಸೇನಾನಿಗಳ ಮನೆಗಳಿಗೆ ಭೇಟಿ ನೀಡಿ, ದೇಶಕ್ಕಾಗಿ ಹೋರಾಟ ಮಾಡಿದ ಅವರ ಅನುಭವಗಳನ್ನು ಹಂಚಿಕೊಳ್ಳಲಾಗುವುದು. ದೇಶಭಕ್ತಿಯನ್ನು ಈ ದೇಶದ ಪ್ರತಿ ಯುವಕರಿಗೆ ಮುಟ್ಟುವ ರೀತಿಯಲ್ಲಿ ಭಾರತಾಂಭೆಯ ಈ ಮಣ್ಣನ್ನು ದೆಹಲಿಯಲ್ಲಿ ಇಡೀ ದೇಶದ ಪ್ರತಿ ಮೂಲೆಯಿಂದ ಮಣ್ಣು ಶೇಖರಿಸಿ ದೇಶದ ವೀರ  ಯೋಧರ ಅಮೃತ ವನದಲ್ಲಿ ಸೇರಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇಗುಲ ಪುಣ್ಯ ಸ್ಥಳದಿಂದ “ನನ್ನ ಮಣ್ಣು ನನ್ನ ದೇಶ” ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಪವಿತ್ರವಾದ ಮಣ್ಣನ್ನು ಜಿಲ್ಲೆಯ ಹಳ್ಳಿ ಹಳ್ಳಿಗಳಿಂದ, ಪವಿತ್ರ ಸ್ಥಳಗಳಿಂದ, ದೇವಸ್ಥಾನಗಳಿಂದ, ದೇಶಕ್ಕಾಗಿ ಪ್ರಾಣ ಸಮರ್ಪಣೆ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರ ಮನೆಗಳಿಂದ ಪವಿತ್ರ ಮಣ್ಣನ್ನು ಸಂಗ್ರಹ ಮಾಡಿ ಸುಮಾರು 45 ದಿನಗಳ ಕಾಲ ಅಭಿಯಾನ ಜಿಲ್ಲೆಯಲ್ಲಿ ನಡೆಯಲಿದೆ. ಇದೇ ರೀತಿಯಾದ ಅಭಿಯಾನ ಈಗಾಗಲೇ ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿದೆ.

ಅಕ್ಟೋಬರ್ ಮೂರನೇ ವಾರದಲ್ಲಿ ಬೆಂಗಳೂರಿಗೆ ಪವಿತ್ರ ಮಣ್ಣನ್ನು ತಲುಪಿಸಿ, ಅಲ್ಲಿಂದ ಅಕ್ಟೋಬರ್ 25ರಂದು ನವದೆಹಲಿಗೆ ತಲುಪಿಸಿ, ನವದೆಹಲಿಯಲ್ಲಿ ನಿರ್ಮಾಣ ಮಾಡಲಿರುವ ಅಮೃತ ವನವನ್ನು 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯನ್ನು ದೇಶದ ಯೋಧರಿಗೆ, ದೇಶಕ್ಕಾಗಿ ಹೋರಾಟ ಮಾಡಿದವರಿಗೆ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 30ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಅಮೃತ ವನವನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಸಿಆರ್ ಬಡಾವಣೆಯ ಗಣಪತಿ ದೇಗುಲದ ಪದಾಧಿಕಾರಿಗಳು, ಮುಖಂಡರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *