ದಾವಣಗೆರೆ, (ಏಪ್ರಿಲ್.29) : ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು ಮೇ ತಿಂಗಳಲ್ಲಿ ಕೇಂದ್ರ ಸಂಪುಟ ಇದಕ್ಕೆ ಒಪ್ಪಿಗೆ ನೀಡಲಿದೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ರೂ. 16 ಸಾವಿರ ಕೋಟಿ ಅನುದಾನ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಿಳಿಸಿದರು.

ಅವರು ಏಪ್ರಿಲ್.29 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಹಾಗೂ ಇತರೆ ಕಾಮಗಾರಿಗಳು ಸೇರಿ 1383.10 ಕೋಟಿ ಮೌಲ್ಯದ 19 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ರೂ.21.05 ಕೋಟಿ ಮೌಲ್ಯದ 18 ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸುವರು. ಮತ್ತು ಸುಮಾರು 12 ಇಲಾಖೆಗಳಿಂದ 1248 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಬರಡು ನಾಡಾಗಿದ್ದ ಜಗಳೂರನ್ನು ಜಲನಾಡಾಗಿ ಪರಿವರ್ತನೆ ಮಾಡಲಾಗುತ್ತಿದೆ. ಜಗಳೂರು ತಾಲ್ಲೂಕಿನಾದ್ಯಂತ 40 ಸಾವಿರ ಎಕೆರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದ್ದು, ಈ ಯೋಜನೆಯಿಂದ 9 ಕೆರೆಗಳನ್ನು ತುಂಬಿಸಲಾಗುತ್ತದೆ. ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯವಾಗಿದ್ದು ಜೂನ್ ಅಥವಾ ಜುಲೈನಲ್ಲಿ ಎಲ್ಲ ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು. ನೀರಾವರಿಯ ಕ್ರಾಂತಿಯನ್ನು ಮಧ್ಯ ಕರ್ನಾಟಕದ ಜಗಳೂರಿನಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ಜಗಳೂರು ಅತ್ಯಂತ ಬರ ಪೀಡಿತ ತಾಲ್ಲೂಕು ಆಗಿದ್ದು, ಈ ಪ್ರದೇಶದಲ್ಲಿ ಕೆರೆ ತುಂಬಿಸುವ ಮತ್ತು ನೀರಾವರಿ ಯೋಜನೆಗಳ ಕನಸು ಮರೀಚಿಕೆಯಾಗಿತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ರೈತರ ಜೀವನವನ್ನು ಹಸನಾಗಿಸಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು.
ಬಜೆಟ್‍ನಲ್ಲಿ ಈ ವರ್ಷ ರಾಜ್ಯ ಸರ್ಕಾರ ರೂ. 20 ಸಾವಿರ ಕೋಟಿಗಿಂತ ಹೆಚ್ಚು ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡಲಾಗಿದೆ. ನೀರಾವರಿ ಯೋಜನೆ ಜೊತೆಗೆ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕೈಗಾರಿಕಾ ಕ್ರಾಂತಿ ಮಾಡುವುದರ ಮೂಲಕ ಮಧ್ಯ ಕರ್ನಾಟಕದ ಭವ್ಯ ಭವಿಷ್ಯವನ್ನು ನಮ್ಮ ಸರ್ಕಾರ ನನಸು ಮಾಡುತ್ತದೆ ಎಂದರು.
ಯಶಸ್ವಿನಿ ಯೋಜನೆಯನ್ನು ರೈತರ ಆರೋಗ್ಯದ ಹಿತದೃಷ್ಠಿಯಿಂದ ಪುನಃ ಜಾರಿಗೆ ತರಲಾಗಿದೆ. ರೈತ ಶಕ್ತಿ ಯೋಜನೆ ಅಡಿಯಲ್ಲಿ ರೈತರಿಗೆ ಡಿಸೇಲ್ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಳೆದ ವರ್ಷ 20 ಲಕ್ಷ ರೈತರಿಗೆ, ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು “ನಂದಿನಿ ಕೃಷಿ ಅಭಿವೃದ್ಧಿ ಬ್ಯಾಂಕ್” ನೀಡುವುದರ ಮೂಲಕ ಅವರನ್ನು ಸಹ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಾಲ-ಸೌಲಭ್ಯಗಳನ್ನು ನೀಡಲಾಗುತ್ತದೆ. ಇಂತಹ ಬ್ಯಾಂಕ್ ದೇಶದಲ್ಲೇ ಪ್ರಥಮ ಎಂದರು.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂಬ ಉದ್ದೇಶದಿಂದ ರೂ.500 ಕೋಟಿಯಲ್ಲಿ ಸುಮಾರು 3 ಲಕ್ಷ ಮಹಿಳಾ ಸ್ವಯಂ ಸಹಾಯ ಸಂಘಗಳಿಗೆ ಸಹಾಯ ಮಾಡಲಾಗಿದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಆಸಿಡ್ ದಾಳಿಗೆ ಒಳಗಾಂತಹ ಮಹಿಳೆಯರಿಗೆ ಪ್ರತಿ ತಿಂಗಳು ರೂ.10 ಸಾವಿರ ಮಾಸಾಶನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ನೊಂದವರ ನೋವು ಕಡಿಮೆ ಮಾಡುವ ಸಲುವಾಗಿ ವಿಶೇಷವಾದ ಬಜೆಟ್ ಮಂಡಿಸಲಾಗಿದೆ. ಮುಂದಿನ ತಿಂಗಳಿನಿಂದ ಬಜೆಟ್‍ನಲ್ಲಿ ಘೋಷಣೆ ಮಾಡಲಾದ ಎಲ್ಲ ಯೋಜನೆಗಳು ಪ್ರಾರಂಭವಾಗಲಿವೆ ಎಂದರು.
ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಉಚಿತವಾಗಿ 75 ಯೂನಿಟ್‍ನಷ್ಟು ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಭೂಮಿ ಇಲ್ಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಭೂಮಿ ತೆಗೆದುಕೊಳ್ಳಲು ರೂ. 20 ಲಕ್ಷ ಸಹಾಯಧನ ನೀಡಲಾಗುತ್ತದೆ. ದೀನದಲಿತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಏಳಿಗೆಗಾಗಿ ಸರ್ಕಾರ ಶ್ರಮಿಸುತ್ತಿದೆ ಎಂದರು.
ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಮಾತನಾಡಿ, ಸರ್ಕಾರ ಬಯಲುಸೀಮೆ ಪ್ರದೇಶದ ರೈತರ ಅಭಿವೃದ್ಧಿ ಹಾಗೂ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜಗಳೂರು, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಿಗೆ ನೀರಾವರಿ ಯೋಜನೆ ರೂಪಿಸಲು ಕ್ರಮ ಕೈಗೊಂಡಿದೆ. ಜಗಳೂರಿನ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಇಲ್ಲಿನ ಜನರ ಬಹುದಿನದ ಕನಸು ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಜಲ ಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಮಾತನಾಡಿ, ಜಗಳೂರು ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೊನೆಯ ಭಾಗದ ರೈತರಿಗೂ ನೀರು ಒದಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಅವೈಜ್ಞಾನಿಕವಾಗಿ ನೀರಿನ ಬಳಕೆ ಕಡಿಮೆ ಮಾಡಬೇಕು, ವೈಜ್ಞಾನಿಕ ದೃಷ್ಟಿಕೋನದಿಂದ ನೀರನ್ನು ಬಳಸಬೇಕು.
ರೈತರ ಬದುಕು ಹಸನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ 10 ಸಾವಿರ ರೂಪಾಯಿಗಳ ಪೆÇ್ರೀತ್ಸಾಹಧನವನ್ನು ನೀಡಲಾಗುತ್ತಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ವಿವಿಧ ಅಭಿವೃದ್ಧಿ ಕೆಲಸಗಳು ಹಾಗೂ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತವೆ ಎಂದರು.
ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಜಿ. ಎಂ ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕಿನ ಜನರು ಉದ್ಯೋಗ ಹರಸಿ ಹೆಚ್ಚು ವಲಸೆ ಹೋಗುತ್ತಾರೆ. ಹಾಗಾಗಿ ಬರದನಾಡು ಎಂಬುದನ್ನು ತೆಗೆದುಹಾಕಿ ನೀರಾವರಿ ಪ್ರದೇಶವಾಗಿ ಮಾಡಿ 1.5 ವರ್ಷದಲ್ಲಿ 09 ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಗಳೂರು ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ ಇಲ್ಲಿನ ರೈತರು ನೀರಾವರಿ ಸೌಲಭ್ಯಗಳಿಲ್ಲದೆ ಆಕಾಶ ನೋಡಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕು ಹಸಿರುದಾಪುಗಾಲಿಟ್ಟಿದೆ. ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸಮಗ್ರ ನೀರಾವರಿ ಯೋಜನೆಗಳನ್ನು ನೀಡಲಾಗಿದೆ. ಇಲ್ಲಿಗೆ ಒಂದು ಬೈಪಾಸ್ ರಸ್ತೆ ಹಾಗೂ ಕೆ.ಎಸ್.ಆರ್.ಟಿ.ಸಿ.ಯಿಂದ ಡಿಪೋ ಬೇಕಾಗಿದ್ದು ಇವುಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಬೃಹತ್ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿಯವರು. ಹೊನ್ನಾಳಿ ಶಾಸಕರು ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಚನ್ನಗಿರಿ ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಯಮಿತ ಅಧ್ಯಕ್ಷರಾದ ಮಾಡಾಳು ವಿರೂಪಾಕ್ಷಪ್ಪ, ವಿಧಾನಪರಿಷತ್ ಸದಸ್ಯರಾದ ರವಿಕುಮಾರ್.ಎನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ, ಮಾಯಕೊಂಡ ಶಾಸಕರು ಹಾಗೂ ಡಾ; ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪ್ರೊ; ಎನ್.ಲಿಂಗಣ್ಣ, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕರಾದ ಡಾ.ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಎ.ಚನ್ನಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಸಿದ್ದಪ್ಪ, ಉಪಾಧ್ಯಕ್ಷೆ ಮಂಜಮ್ಮ ಬಿ.ಮಂಜಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

