ಕೆ.ಟಿ.ಸೋಮಶೇಖರ್, ಶಿಕ್ಷಕರು,
ಹೊಳಲ್ಕೆರೆ. ಮೊ.ನಂ: 9008569286
ಯುಗದ ಆದಿ ಯುಗಾದಿ! ‘ ಯುಗ ‘ ಎಂದರೆ ಒಂದು ದೀರ್ಘ ಕಾಲಾವಧಿ. ನಾವು ಹಬ್ಬ ಎಂದು ಆಚರಿಸುವ
ಯುಗಾದಿಯ ‘ಯುಗ ‘ ಎಂದರೆ ವರುಷ. ‘ ಆದಿ ‘ ಎಂದರೆ ಆರಂಭ! ಅಂದರೆ ಹೊಸ ವರುಷದ ಆರಂಭ! ಇದನ್ನು ಹಬ್ಬ ಎಂದು ಆಚರಿಸಲಾಗುವುದು. ಯುಗಾದಿಯನ್ನು ಚಂದ್ರನ ಚಲನೆಯನ್ನು ಎಣಿಸಿ ಚಾಂದ್ರಮಾನ ಯುಗಾದಿಯೆಂದು ಸೂರ್ಯನ ಚಲನೆಯನ್ನು ಪರಿಗಣಿಸಿ ಸೌರಮಾನ ಯುಗಾದಿಯೆಂದು ಹಿಂದೂ
ಪಂಚಾಂಗದ ಪ್ರಕಾರ ನಿರ್ಣಯಿಸುವರು.
ಕೆಲವು ರಾಜ್ಯಗಳು ಸೌರಮಾನ ಯುಗಾದಿ ಆಚರಿಸಿದರೆ ಮತ್ತೆ ಕೆಲವು ರಾಜ್ಯಗಳು ಚಂದ್ರಮಾನ ಯುಗಾದಿಯನ್ನು ಆಚರಿಸುವುವು. ಯುಗಾದಿಯನ್ನು ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದಲೂ ಆಚರಿಸುವರು.
ನಮ್ಮ ರಾಜ್ಯದಲ್ಲಿ ಚಂದ್ರಮಾನ ಯುಗಾದಿಯನ್ನು ಆಚರಿಸುವವರು. ಪ್ರಕೃತಿ ಸಿಂಗಾರಗೊಂಡು ನವ ಚೈತನ್ಯದಿ ಸಂಭ್ರಮಿಸುವ ಚೈತ್ರ ಮಾಸದ ಸುಂದರ ಸಮಯದಿ ಬರುವುದು ಈ ಯುಗಾದಿ!
ಯಾರು ಯುಗಾದಿಯನ್ನು ಹೊಸ ವರುಷ
ಅಂತ ಕೂಗಿ ಹೇಳಿ ಹೊಸ ವರುಷವ
ಸೃಜಿಸುವಂತಿಲ್ಲ! ಅದನ್ನು ಪ್ರಕೃತಿಯೇ ಸೃಜಿಸುತ್ತದೆ! ಶಿಶಿರ ಪ್ರಕೃತಿಯನ್ನು ಶೈತ್ಯದ
ಗಾಳಿಯಕಾಲ್ಗತಿಗೆ ಸಿಲುಕಿಸಿ ಗಿಡಮರಗಳ ಗಡಗಡ ನಡುಗಿಸಿ ಒರಟಾಗಿಸಿ ಸೀಳಿ ಪ್ರಕೃತಿಯ ಅಂದಗೆಡಿಸುತ್ತದೆ.
ವಸಂತ ಆಗಮಿಸಿ ಹಾಳಾದ ಎಲೆಯ ಹಳೆ ಕೊಳೆ ವಸ್ತ್ರವ ಕಳಚುತ ಬೋಳಾದ ಮರದ ತುಂಬ ಹೊಸಗನಸ ಹೊಮ್ಮಿಸುತ್ತ, ಹೊಸ ಹಸಿರ ನವ ಚಿಗುರ ಉಡುಪು ಧರಿಸುತ್ತ ಬಗೆ ಬಗೆ ಬಣ್ಣದ ವಿವಿಧಾಕಾರದ ಹೂ ಕಾಯಿಗಳ ಗುಚ್ಛಗಳ ಒಡವೆಗಳಿಂದ ಸಿಂಗರಿಸುತ, ಗಾಳಿಗೆ ಗಿಡ ಮರಗಳ ಹಿಗ್ಗಿನಲಿ ಪಲ್ಲವಿಸುವ ನೃತ್ಯ ಮಾಡಿಸುತ, ಕೋಗಿಲೆಯ ಕರೆಯಿಸಿ ಮಧುರ ಕಂಟಕೆ ಮಾವಿನ ಚಿಗುರ ವಿವಿಧ ಕಾಯಿ ಸವಿಯಿಸಿ, ಕುಹೂ ಕುಹೂ ಎಂದು ವಸಂತನಾಗಮನದ ಗಾನಗೈಸಿ ಪ್ರೇಮಿಗಳ ಪ್ರೇಮದಾಟಕೆ ಸುಂದರ ಸುಮಧುರ ವಾತಾವರಣದ ವೇದಿಕೆ ಸೃಜನೆಯಾಗಿದೆ.
ಬನ್ನಿ ಪ್ರೇಮಿಗಳೇ ಎಂದು ಆಹ್ವಾನಿಸುತ್ತ ಪಕ್ಷಿಗಳಿಂದ ರೆಂಬೆ ಕೊಂಬೆಗೆ ಅನೇಕ
ವಿಧವಿಧದ ಗೂಡು ತೂಗುವ ತೊಟ್ಟಿಲುಗಳ ಕಟ್ಟಿಸುತ ಮರಿಗಳ ಚಿಲಿಪಿಲಿಗುಟ್ಟಿಸುತ ಜೋಗುಳ ಪಾಡಿಸುತ, ಗುಟುಕು ಕೊಡಿಸುತ, ಮಕ್ಕಳ ಬೆಳವಣಿಗೆಯಲ್ಲಿ ಸಂಭ್ರಮಿಸುವಂತೆ ಮಾಡುವುದು!
ದುಂಬಿಯ ಝೇಂಕಾರದ ಮಂಗಳ ವಾದ್ಯಗಳಲಿ ಪ್ರಕೃತಿಯ ಮೀಯಿಸಿ ಹೂಗಳ ಮೈಮರೆಯಿಸಿ ರಮಿಸಿ, ಮಧುವ ಹೀರಿಸುತ ಕಾಯಿಯ ರೂಪ ಕೊಡತೊಡಗುವುದು.
ಬಣ್ಣ ಬಣ್ಣದ ಚಿಟ್ಟೆಗಳ ಚಿತ್ತಾರದ ಲೋಕವ
ಸೃಜಿಸಿ ಪ್ರಕೃತಿಯ ಸುಂದರ ಮಾಡುವುದು! ಪ್ರಕೃತಿಯಲಿ ಮಧುರ ಸುಂದರ ಹಿತಕಾರಿ ಹವಾಮಾನ ಸೃಜಿಸಿ ಜೀವಿಗಳಲಿ ಸಂಭ್ರಮ ಹೆಚ್ಚಿಸಿ ಇಡೀ ಪ್ರಕೃತಿಯು ಹೊಸತಾಗಿ ಕಾಣಿಸುತ
ಹೊಸ ವರುಷವೆನಿಸುವುದು!
ಪ್ಲವನಾಮ ಸಂವತ್ಸರಕೆ ವಿದಾಯ ಹೇಳಿ ಶುಭಕೃತ ನಾಮ ಸಂವತ್ಸರವ ಅದ್ಧೂರಿಯಾಗಿ
ಸ್ವಾಗತಿಸುವ ಹಬ್ಬ ಈ ಯುಗಾದಿ. ಯುಗಾದಿಯಲಿ ಸೂರ್ಯನ ಕಿರಣಗಳು ನೇರವಾಗಿ ಬಿದ್ದು, ದಿನ ಕಳೆದಂತೆ ಹಗಲು ಶಾಖ ಹೆಚ್ಚುವುದರಿಂದಾಗುವ ತೊಂದರೆಗಳ ಇಲ್ಲವಾಗಿಸಲು, ಶಿಶಿರ ಚರ್ಮಕ್ಕೆ ಮಾಡಿದ ತೊಂದರೆ ಸರಿಮಾಡಲು ಎಣ್ಣೆ ಮಜ್ಜನ, ಅಭ್ಯಂಗ ಸ್ನಾನ, ಹಬ್ಬವ ಸವಿಯಲು ನೀರು ತುಂಬುವುದು, ಸಕಲ ಚೇತನಕೆ ಕಾರಣನಾಗುವ ನವ ವರುಷದ ಸೂರ್ಯನಿಗೆ ನಮಸ್ಕಾರ, ವಾರ್ಷಿಕ ಯೋಜನೆಯ ಸಂಕೇತವಾದ ಪಂಚಾಂಗ ಶ್ರವಣ, ಪ್ರಕೃತಿಯಂತೆ ಹೊಸದಾಗಿ ಕಂಡು ಸಂಭ್ರಮಿಸಲು ಹೊಸ ದಿರಿಸು ಧಾರಣೆ, ಹೊಸ ಯುಗದ ಚಂದ್ರ ದರುಶನ, ಚಂದ್ರ ಫಲ ಪರಭಾವನ. ಭಗವಂತನ ಪ್ರಾರ್ಥನೆ, ಸಮ ದೃಷ್ಟಿಯ ಸಂಕೇತವಾದ ಬೇವು- ಬೆಲ್ಲ ಸೇವನೆ ಯುಗಾದಿ ಹಬ್ಬದ ಭಾಗಗಳು. ಆಚರಣೆಯಲಿ ಅಡಗಿವೆ ಸಂಭ್ರಮಗಳು!
ಯುಗಾದಿಯಂದು ಪಾಪ ನಾಶಕ್ಕಾಗಿ,
ಆಯುಷ್ಯ ವೃದ್ಧಿಸಿಕೊಳ್ಳಲು ನಾನಾಕಡೆ
ಪಂಚಾಂಗ ಶ್ರವಣ ಮಾಡುವರು. ರೈತನ ಬದುಕೇ ದೇಶದ ಬದುಕಾಗಿತ್ತು! ಅವನ ಆಗು ಹೋಗು ದೇಶದ ಆಗು ಹೋಗಾಗಿತ್ತು! ಪ್ರಯುಕ್ತ ಪಂಚಾಂಗ ಶ್ರವಣಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು! ಯುಗಾದಿಯಂದು ವರುಷದ ಮಳೆ -ಬೆಳೆ, ವಸ್ತುಗಳ – ಪದಾರ್ಥಗಳ ಮಂದಿ -ತೇಜಿ, ರಾಶಿಗಳ ಫಲಾಫಲ ಭವಿಷ್ಯ ಹೇಳಲಾಗುತ್ತಿತ್ತು.
ಇದನ್ನು ನಾವು ಇಂದಿನ ಹಾವಾಮಾನ ಮತ್ತು ವಾಯುಗುಣ ವರದಿ ಅಂತ ಹೇಳಬಹುದು. ಪಂಚಾಗ ಶ್ರವಣದಿಂದ ಯಾವ ಯಾವ ಬೆಳೆ ಎಷ್ಟೆಷ್ಟು ಬೆಳೆಯಬೇಕು ಯಾವುದನ್ನು ಬೆಳೆಯಬಾರದು, ಯಾವಾಗ ಬೆಳೆಯಬೇಕು, ಇರುವ ದವಸ ಧಾನ್ಯ ಎಷ್ಟು ಮಾರಬೇಕು? ಯಾವಾಗ ಮಾರಬೇಕು? ಎಷ್ಟು ಉಳಿಸಿಕೊಳ್ಳಬೇಕು ಎಷ್ಟು ಖರ್ಚು ಮಾಡಬೇಕು, ಅತಿವೃಷ್ಟಿ ಅನಾವೃಷ್ಟಿಗಳ ಹೇಗೆ ನಿಭಾಯಿಸಬೇಕು ಎಂದು ಚಿಂತಿಸಿ ಯೋಜನೆ ರೂಪಿಸಿಕೊಳ್ಳಲು ಸಮತೋಲನವಾಗಿ ಬದುಕಲು ಪಂಚಾಗ ಶ್ರವಣದಿಂದ ರೈತರಿಗೆ ಅನುಕೂಲವಾಗುತ್ತಿತ್ತು.
ಒಟ್ಟಾರೆ ಪಂಚಾಂಗದ ಶ್ರವಣ ಬದುಕನ್ನು ಸುಂದರವಾಗೊಳಿಸಿಕೊಳ್ಳುವ ವಾರ್ಷಿಕ ಯೋಜನೆ ಎಂದರೆ ತಪ್ಪಾಗದು! ಪ್ರಯುಕ್ತ ಇಂದು ವಿದಾಯ ಹೇಳಲು ಹೊರಟ ವರುಷದ ಯೋಜನೆಗಳ ಯಶಸ್ಸನ್ನು ವಿಫಲತೆಯನ್ನು ತಿಳಿದು
ಅವುಗಳ ಆಧಾರದ ಮೇಲೆ ನಾವು ಕಂಡ ಕನಸುಗಳ ಸಾಕಾರಗೊಳಿಸುವ ಯೋಜನೆ ರೂಪಿಸಲು ಯೋಚಿಸಿ ನೀಲನಕ್ಷೆ ತಯಾರಿಸಲು ಶುಭದಿನ! ಆ ಶುಭಕಾರ್ಯದ ಆರಂಭಕೆ ಕಂಕಣಕಟ್ಟಿಕೊಳ್ಳಲು ಇದು ಸುಸಮಯ!
ಹೊಸ ಕನಸ ಕಾಣುತ ಹೊಸ ವರುಷ ಹೊಸ ಹರುಷ ತರಲಿ ಎಂದು ಆಶಿಸುತ ” ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ” ಎಂದು ಗುನುಗುತ್ತಾ
ಒಬ್ಬಟ್ಟು ಉಂಡು ಹೊಸಬಟ್ಟೆಯುಟ್ಟು
ಸಂಭ್ರಮದಿ ಆಚರಿಸಬೇಕು ಯುಗಾದಿಯ.
ಡೆಲ್ಟ, ಓಮೈಕ್ರೋನ್ ಗಳು ದಾಳಿಯಿಟ್ಟು
ಬಂಧು ಬಾಂಧವರ, ಆತ್ಮೀಯರ, ಪ್ರೀತಿಪಾತ್ರರ ಅಕಾಲ ಮೃತ್ಯು ನುಂಗಿ
ನೊಣೆದು ಅಪಾರ ದುಃಖದಿ ಸುರಿಸಿದ ಕಣ್ಣೀರ ಧಾರೆ ಬತ್ತದ ಕಂಗಳಲಿ ಯಾವ ಕನಸ ಕಾಣಲಿ ? ಏನ ಆಶಿಸಲಿ? ಏನ ಗುನುಗಲಿ? ಹೊಸ ವೈರಸ್ ದಾಳಿ ಮಾಡದಿರಲಿ, ಆಸ್ಪತ್ರೆಗಳಿಗೆ, ಆಕ್ಸಿಜನ್ಗೆ, ಬೆಡ್ಗೆ … ಕೊರತೆಯಾಗಿ, ಜನ ದಾರಿ ಹೆಣವಾಗಿ, ಜೆಸಿಬಿಯಲಿ ಗುಂಡಿ ತೋಡಿ ಶವ ಸಂಸ್ಕಾರದ ಶಾಸ್ತ್ರ ನೆರವೇರಿಸುವ ದಿನ ಬರದಿರಲಿ ಎಂದು ಮೊದಲು ಆಶಿಸಿ ನಂತರ ಸಾಕಷ್ಟು ಸಾವು ನೋವು ಅಕಾಲ ಮೃತ್ಯುಗಳ ಕಂಡಮೇಲಾದರೂ ಮಾನವ ಇತರರ ಬದುಕ ಕೆಡಿಸಿಬಂಧುಬಳಗದ ಕಷ್ಟಕ್ಕೆ ಮಿಡಿಯದೆ ಕೋಟ್ಯಪ್ಪ ಆಗುವುದ ಬಿಟ್ಟು ತನ್ನ ಬದುಕ ಸುಂದರ ಮಾಡಿಕೊಳ್ಳಲಿ ಎಂದು ಆಶಿಸಬೇಕು!
ಪರೋಪಕಾರಾರ್ಥಾಯ ಶರೀರಂ ಇದಂ ಮಿತ್ಥಂ “, ಎಲ್ಲರೂ ಬದುಕುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ” ಅಂತಹದರಲ್ಲಿ ಇತರರ
ಬದುಕು ಕೆಡಿಸಿ ಆಗಬೇಕಾ ಕೋಟ್ಯಪ್ಪ? ಉಳಿಯಲಿಲ್ಲ ಕೋಟೆಪ್ಪ ಕೋಟಿಯಿಂದ! ಉಳಿದ ಅಪ್ಪು ದಾನ ಧರ್ಮದಿಂದ! ಗಳಿಸಿದುದರಲ್ಲೇ ಆಗಿ ದೀನರಿಗೆ ಆಪದ್ಭಾಂಧವ ಮಾಡಿಕೊಳ್ಳಬಹುದು ಎಲ್ಲರೂ ತಮ್ಮ ತಮ್ಮ ಬದುಕ ಸುಂದರ! ಇತರರ ಕಷ್ಟ ಕರಗಿಸುವುದರಿಂದ ನೋವು ನೀಗಿಸುವುದರಿಂದ ಲಭಿಸುವುದು ನೆಮ್ಮದಿಯ ಹಂದರ! ಬಾಳ ಬಾನಿನಲ್ಲಿ ಮೂಡುವುದು ಸಾರ್ಥಕ್ಯದ ನವ ಚಂದಿರ! ಸಾವೆನಿಸುವುದು ಸುಂದರ! ಇದಕ್ಕಾಗಿ ಬದುಕ ಮಾಡಿಕೊಳ್ಳೋಣ
ಸುರಸುಂದರ!
ಕೆ.ಟಿ.ಸೋಮಶೇಖರ್, ಶಿಕ್ಷಕರು, ಹೊಳಲ್ಕೆರೆ.
ಮೊ.ನಂ: 9008569286