ಯುಗಾದಿ ಎಂದರೆ ಹೊಸ ಸಂವತ್ಸರದ ಆಗಮನ
ಬೇವು-ಬೆಲ್ಲ ಹೂವು ತೋರಣಗಳ ಚಿಗುರಿನ ಸಂಭ್ರಮ
ಎಣ್ಣೆಸ್ನಾನ, ದೇವರ ಪೂಜೆ ಹೊಸಬಟ್ಟೆ ಉಡುದಾರ
ಎಲ್ಲ ಹೊಸತರ ನಡುವೆ ಹೋಳಿಗೆ, ಹಾಲು ತುಪ್ಪದ ಘಮಘಮ
ಘನ ಘೂರ ಘಟನೆಗಳೆಲ್ಲಾ ಇಂದಿಗೇ ಕೊನೆಯಾಗಲಿ
ಯುದ್ಧ ಕಾಲದಲ್ಲಿ ಪೋನು ರಿಂಗಣಿಸಿದಾಗಲೆಲ್ಲಾ
ಮಕ್ಕಳ ಬರುವನ್ನು ಎದುರು ನೋಡುವ ಹೆತ್ತವರ ಬಾಳಲ್ಲಿ
ಹೆದರಿ ನಡುಗುವ ವೃದ್ಧರ ಕಂಗಳಲ್ಲಿ ಮಂಕಾಗದಿರಲಿ ಯುಗಾದಿ
ಆಹಾರ ಗಾಳಿ-ನೀರು ಪರಿಸರ ಶುಭ್ರವಾಗಿರಲು
ಶಿಕ್ಷಣ-ಆರೋಗ್ಯ ಜನ ಸಾಮಾನ್ಯರ ಕೈಗೆಟುಕಲು
ಕೆರೆ-ಬಾವಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರಲು
ಮಾನವೀಯ ಮೌಲ್ಯಗಳನ್ನು ಭಿತ್ತಿ ಬೆಳೆಯಲು ಬರಬೇಕು ಯುಗಾದಿ
ಊರು ಬದಲಾದಂತೆ ಹಳ್ಳಿ ಹುಡುಗರೆಲ್ಲ ಕೆಲಸದ ಬೆನ್ನೇರಿ
ದೊಡ್ಡ ದೊಡ್ಡ ಪಟ್ಟಣ ಸೇರಿದ ಮೇಲಂತೂ ಹಿರಿಯ ಜೀವಗಳು
ಊರಕಟ್ಟೆಯ ಮೇಲೆ ಸುಖದು:ಖ ಹಂಚಿಕೊಳ್ಳುವರು
ಮನೆ ಬಣಬಣವಾಗಿ ಕಾಯುತ್ತಿದ್ದೇವೆ ಬರಲಿ ಯುಗಾದಿ ಎಂದು
ಸುಖ ಬಂದಾಗ ನಗುವು ದು:ಖ ಬಂದಾಗ ನೋವು
ಸಮರಸದಿ ಬೆರೆತರೆ ಬದುಕು ಬಂಗಾರವು
ನಮ್ಮ ಬಾಳಲ್ಲಿ ಬೇವಿನ ಕಹಿ ಇರಲಿ ಬೆಲ್ಲದ ಸಿಹಿ ಇರಲಿ
ಸಮಭಾವದಿಂದ ಸ್ವೀಕರಿಸಿ ಬಾಳುವುದೇ ಯುಗಾದಿ
ಹೊಸ ಚೈತನ್ಯ ಹೊಸ ಆಲೋಚನೆ, ಹೊಸ ಗುರಿಯ ಕಡೆಗೆ
ಬರಲಿ ನವಯುಗಾದಿ ಚಿಂತೆಯೆಂಬ ಕಂತೆಯ ಕಳೆದ
ರಟ್ಟೆ ಸವೆಯುವತನಕ ದುಡಿದು, ದಣಿವಿಲ್ಲದೆ ಸಾಗುವ ಹೆಜ್ಜೆಗಳು
ದುಡಿವೆವು ರೈತರಾಗಿ, ಸೈನಿಕರಾಗಿ ಈ ದೇಶದ ಉನ್ನತಿಗಾಗಿ
ಮತ್ತೊಮ್ಮೆ ಬರಲಿ ಯುಗಾದಿ ಹೊಸ ಸಂಭ್ರಮ ತರಲಿ.
ಪಾಂಡುರಂಗ ಹುಯಿಲಗೋಳ
ಚಿತ್ರದುರ್ಗ , 9448924404