ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮದ ನಡುವೆ, ಮರುದಿನದ ಹೊಸತೊಡಕು ಸಡಗರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಾಂಸ ಹಾಗೂ ಮಟನ್‌ಗೆ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಮುಂಜಾನೆ ಮಾಂಸದಂಗಡಿಗಳ ಮುಂದೆ ಜನರು ಕ್ಯೂನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು. ಕುಟುಂಬದವರು, ಬಂಧು-ಮಿತ್ರರೊಂದಿಗೆ ಸೇರಿ ಮಾಂಸದೂಟ ಸವಿಯುವ ಪರಂಪರೆಯ ಹಿನ್ನೆಲೆ, ಮಟನ್ ಹಾಗೂ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ.
ಹೆಚ್ಚಿದ ಬೇಡಿಕೆಯಿಂದಾಗಿ ಮಟನ್ ಬೆಲೆ ಕೂಡ ಏರಿಕೆಯಾಗಿದೆ. ಸಾಮಾನ್ಯವಾಗಿ ₹600-650 ಇದ್ದ ಮಟನ್ ದರ ಇಂದು ₹800 – 900ರವರೆಗೆ ಏರಿಕೆಯಾಗಿದೆ. ಕೆಲವೆಡೆ ಇನ್ನಷ್ಟು ದರ ಹೆಚ್ಚಳ ಕಂಡುಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ‘ಗುಡ್ಡೆ ಮಾಂಸ’ಕ್ಕೆ ವಿಶೇಷ ಬೇಡಿಕೆ ಇದೆ. ಬೆಂಗಳೂರು, ಮಂಡ್ಯ ಗ್ರಾಮಗಳಲ್ಲಿ ಮುಂಜಾನೆಲೇ ಕುರಿ-ಮೇಕೆ ಕಟ್ ಮಾಡಲಾಗಿದ್ದು, ಜನರು ದೊಡ್ಡ ಸಂಖ್ಯೆಯಲ್ಲಿ ಖರೀದಿಗೆ ಆಗಮಿಸಿದ್ದಾರೆ.
ಇನ್ನೊಂದೆಡೆ, ಬೆಂಗಳೂರಿನಲ್ಲಿಯೂ ಮಟನ್ ಮತ್ತು ಚಿಕನ್ ಖರೀದಿಗೆ ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ದೇವನಹಳ್ಳಿ, ಬ್ಯಾಟರಾಯನಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ಅಂಗಡಿಗಳು ತೆರೆದು ವ್ಯಾಪಾರ ಜೋರಾಗಿದೆ.
ಈ ಬಾರಿ ಹೊಸತೊಡಕು ಹಿನ್ನೆಲೆಯಲ್ಲಿ ನಾಟಿ ಕೋಳಿ ಹಾಗೂ ಮೊಟ್ಟೆಗಳಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಆರೋಗ್ಯದ ದೃಷ್ಟಿಯಿಂದ ನಾಟಿ ಹಾಗೂ ಜವಾರಿ ಆಹಾರಕ್ಕೆ ಜನರು ಹೆಚ್ಚು ಆದ್ಯತೆ ನೀಡುತ್ತಿರುವುದು ಗಮನಾರ್ಹ.ಯುಗಾದಿ ಹಬ್ಬದ ಹೊಸತೊಡಕು ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮಾಂಸ ಮಾರುಕಟ್ಟೆಯಲ್ಲಿ ಚಟುವಟಿಕೆ ಗರಿಗೆದರಿದ್ದು, ಬೇಡಿಕೆಯೊಂದಿಗೆ ಬೆಲೆ ಏರಿಕೆಯೂ ಕಂಡುಬಂದಿದೆ.










