ಉಡುಪಿ: ದಾನ ದಾನಕ್ಕಿಂತ ಅನ್ನದಾನ ಮಹಾದಾನ ಎಂಬ ಮಾತಿದೆ. ಹಸಿದವರಿಗೆ ಹೊಟ್ಟೆ ತುಂಬಿಸಿದರೆ ಪುಣ್ಯ ಬರುತ್ತೆ ಎನ್ನುತ್ತಾರೆ. ಪಾಪ ಪುಣ್ಯದ ವಿಚಾರದಲ್ಲಿ ಅನ್ನದಾನ ಮಾಡಿದರೆ ಶ್ರೇಷ್ಠ. ಮನುಷ್ಯ ಬದುಕಿರುವ ಒಂದು ಭಾಗವೇ ಅನ್ನ. ಹೀಗಾಗಿ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲೂ ಅನ್ನದಾನವನ್ನು ಮಾಡುತ್ತಾರೆ. ಕ್ಷೇತ್ರಕ್ಕೆ ಹೋದವರೆಲ್ಲಾ ಪ್ರಸಾದ ರೂಪದಲ್ಲಿ ಅನ್ನವನ್ನು ಸ್ವೀಕರಿಸಿ ಬರುತ್ತಾರೆ. ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕೊಲ್ಲೂರಿನಲ್ಲೂ ಅನ್ನದಾನ ನಡೆಯುತ್ತದೆ. ಇದೇ ವಿಚಾರಕ್ಕೀಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಕೊಲ್ಲೂರು ಮೂಕಾಂಬಿಕೆ ತಾಯಿಯನ್ನು ನೋಡಲು ರಾಜ್ಯದಿಂದ ಮಾತ್ರವಲ್ಲ, ಅಂತರಾಜ್ಯದಿಂದಲೂ ಬರುತ್ತಾರೆ. ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ದೇವಾಲಯದಿಂದ ಮಾಡಲಾಗುತ್ತದೆ. ಇದು ಅತ್ಯಂತ ಗುಣಮಟ್ಟದ ಆಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಕೊಲ್ಲೂರು ಮೂಕಾಂಬಿಕೆ ಜಗತ್ತಿನ ಶ್ರೀಮಂಂತ ದೇವರಲ್ಲಿ ಒಂದು.
ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಆಹಾರ ವಿಚಾರವಾಗಿ ಸರ್ಟಿಫಿಕೇಟ್ ಸಿಕ್ಕಿದೆ. ಇಲ್ಲಿ ನೀಡುವ ಆಹಾರ ಬಹಳ ಗುಣಮಟ್ಟದ್ದು ಮತ್ತು ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾದಂತದ್ದು ಎಂದು ಪ್ರಮಾಣ ಪತ್ರ ನೀಡಲಾಗಿದೆ. ಇಲ್ಲಿನ ಆಹಾರ ತಯಾರಿಸುವ ಕೊಠಡಿಯೂ ಅತ್ಯಂತ ಸುಸಜ್ಜಿತವಾಗಿದೆ. ದಾಸ್ತಾನು ಕೊಠಡಿಯೂ ಗಾಳಿ ಬೆಳಕಿನಿಂದ ಕೂಡಿದ್ದು, ಆಹಾರ ಸಂರಕ್ಷಣೆಗೆ ಅತ್ಯತ್ತಮ ವಾತಾವರಣ ನಿರ್ಮಿಸಿದ್ದಾರೆ. ಈಗ ಬಂದಿರುವ ಪ್ರಮಾಣಪತ್ರ ಭಕ್ತಾಧಿಗಳಿಗೆ ಮತ್ತಷ್ಟು ಖುಷಿ ನೀಡಿದೆ.