ಚಿತ್ರದುರ್ಗ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಶ್ರೀ ಆದಿ ಹೊನ್ನಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮಂಜೂರು ಮಾಡಿರುವ ಎರಡು ಲಕ್ಷ ರೂ.ಗಳ ಡಿ.ಡಿ.ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಶನಿವಾರ ವಿತರಿಸಿದರು.
ಕರುವಿನಕಟ್ಟೆ ವೃತ್ತದ ಸಮೀಪವಿರುವ ಆದಿ ಹೊನ್ನಮ್ಮ ದೇವಸ್ಥಾನದಲ್ಲಿ ೨ ಲಕ್ಷ ರೂ.ಗಳ ಡಿ.ಡಿ.ವಿತರಿಸಿ ಮಾತನಾಡಿದ ದಿನೇಶ್ ಪೂಜಾರಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾಡಿ ಡಾ.ಡಿ.ವೀರೇಂದ್ರ ಹೆಗಡೆಯವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸ್ವಸ್ಥ ಸಮಾಜ ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳಾದ ರುದ್ರಭೂಮಿ ದೇವಸ್ಥಾನಗಳ ಅಭಿವೃದ್ದಿ, ಸಮುದಾಯ ಭವನ, ಹಾಲು ಉತ್ಪಾದಕರ ಕಟ್ಟಡ, ನಿರ್ಗತಿಕರಿಗೆ ಮಾಶಾಸನ, ಸುಜ್ಞಾನ ನಿಧಿ, ಗೋಶಾಲೆ, ಶುದ್ದ ಗಂಗಾ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಶೌಚಾಲಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅದರಂತೆ ಆದಿ ಹೊನ್ನಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೂ ನೀಡಿರುವ ಎರಡು ಲಕ್ಷ ರೂ.ಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಶ್ರೀಮತಿ ರೂಪ ಜನಾರ್ಧನ್ ಮಾತನಾಡಿ ಧರ್ಮಸ್ಥಳದಿಂದ ಬಂದಿರುವ ಪ್ರಸಾದವನ್ನು ಎಲ್ಲರೂ ತಪ್ಪದೆ ಸ್ವೀಕರಿಸಿ ಯೋಜನೆಯ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಗತಿಗೆ ಆದ್ಯತೆ ನೀಡಿ ಮಹಿಳೆಯರು ಸಬಲೀಕರಣವಾಗಬೇಕೆಂದು ಹೇಳಿದರು.
ಆದಿ ಹೊನ್ನಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷೆ ಶೋಭ ವೇಣುಗೋಪಾಲ, ಸಂಸ್ಥೆಯ ಯೋಜನಾಧಿಕಾರಿ ಯಶೋಧಶೆಟ್ಟಿ, ವಲಯ ಮೇಲ್ವಿಚಾರಕ ಗಣೇಶ್ ಬಾನಪ್ಪನವರ್, ಕಾರ್ಯದರ್ಶಿ ಸುಲೋಚನಾ, ಕಮಿಟಿ ಸದಸ್ಯರುಗಳಾದ ಸಿದ್ದಮ್ಮ, ಲಕ್ಷ್ಮೀ ಅಂಬಿಕಾ, ಗಂಗಮ್ಮ, ಲವಕುಮಾರ, ಕೃಷ್ಣಪ್ಪ, ಸೇವಾಪ್ರತಿನಿಧಿ ದ್ರಾಕ್ಷಾಯಿಣಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.