ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಯಾವುದೇ ಆರೋಗ್ಯ ಸಮಸ್ಯೆ, ಅಥವಾ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಸೋಂಕಿತರ ಸಂಪರ್ಕದಲ್ಲಿದ್ದವರ ಜಿನೊಮಿಕ್ಸ್ ಸೀಕ್ವೆನ್ಸ್ ವರದಿ ಇನ್ನೂ ಬಂದಿಲ್ಲ. ಬೇರೆ ರಾಜ್ಯಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಇಲ್ಲಿ ತನಕ ಎರಡು ಕೇಸ್ ಮಾತ್ರ ಇದೆ. ಅವರ ಸಂಪರ್ಕಿತರಿಗೆ ಯಾವುದೇ ಸಮಸ್ಯೆಗಳು, ಲಕ್ಷಣಗಳು ಕಂಡುಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ನಿರ್ದೇಶಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಒಮಿಕ್ರಾನ್ ಸೋಂಕಿತರ ಸಂಪರ್ಕ ಹೊಂದಿದ್ದವರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಎರಡು ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಒಮಿಕ್ರಾನ್ ಸೋಂಕು ತೀವ್ರತೆ ಇರುವುದಿಲ್ಲ. ಇದಕ್ಕೆ ಸೋಂಕಿತರ ಸಂಪರ್ಕದಲ್ಲಿರುವ ಲಕ್ಷಣಗಳೇ ಉದಾಹರಣೆಯಾಗಿದೆ. ಒಂದು ಡೋಸ್ ನಿಂದ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ಎರಡೂ ಡೋಸ್ ತೆಗೆದುಕೊಂಡಾಗ ಮಾತ್ರ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುತ್ತದೆ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.