ಸುದ್ದಿಒನ್, ಚಿತ್ರದುರ್ಗ, ಜುಲೈ. 13 : ಇಂದು ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿದೆ. ಟಿವಿ ಮಾಧ್ಯಮಗಳು ಹೆಚ್ಚಿನ ಪರಿಣಾಮ ಬೀರುತ್ತಿವೆ. ಇಂದಿನ ಮಕ್ಕಳಿಗೆ ಟಿವಿ ಮಾಧ್ಯಮಗಳೇ ಮೊದಲ ಪಾಠಶಾಲೆ ಎನ್ನುವಂತಾಗಿದೆ. ಮಾಧ್ಯಮಗಳ ಹೆಚ್ಚಿನ ಪ್ರಭಾವ ಬೀರುವ ಶಕ್ತಿ ಹೊಂದಿದ್ದು, ಇದು ಸಮಾಜದ ಏಳಿಗೆ ಬಳಕೆಯಾಗಲಿ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ “ಪತ್ರಿಕಾ ದಿನಾಚರಣೆ”ಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿ, ಪತ್ರಿಕೆಗಳು ಸಮಾಜದ ಪ್ರತಿಬಿಂಬ ಹಾಗೂ ಪ್ರಜಾಪ್ರಭುತ್ವದ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಕನ್ನಡ ನಾಡಿನ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆಯನ್ನು 1843 ಜುಲೈ 1 ರಂದು ಪಾದ್ರಿ ಹರ್ಮನ್ ಮೋಗ್ಲಿಂಗ್ ಅವರು ಪ್ರಾರಂಭಿಸಿದರು. ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲಗಂಗಾಧರ ತಿಲಕ್ ಬ್ರಿಟಿಷರ ದುರಾಡಳಿತ, ಬ್ರಿಟಿಷರು ಜನರಿಗೆ ಮಾಡುತ್ತಿರುವ ಶೋಷಣೆಯನ್ನು ಪತ್ರಿಕೆಗಳ ಮೂಲಕ ಜನರಿಗೆ ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮಹಾತ್ಮ ಗಾಂಧೀಜಿ “ಯಂಗ್ ಇಂಡಿಯಾ” ಹಾಗೂ “ಹರಿಜನ” ಪತ್ರಿಕೆಗಳನ್ನು ಆರಂಭಿಸಿದರು. ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪತ್ರಿಕೆ ಆರಂಭಿಸಿದರು.
ಅಂಬೇಡ್ಕರ್ ಸಹ “ಮೂಕನಾಯಕ” ಹಾಗೂ “ಬಹಿಷ್ಕøತ ಸಮಾಜ” ಪತ್ರಿಕೆಗಳ ಮೂಲಕ ದೀನ ದಲಿತರನ್ನು ಸಂಘಟಿಸಿ ಅಭಿವೃದ್ಧಿ ಪಥದ ಕಡೆಗೆ ಮುನ್ನಡಿಸಿದರು. ಸ್ವಾತಂತ್ರ್ಯ ನಂತರ ಮಾಜಿ ಪ್ರಧಾನಿ ನೆಹರು ಅವರ ಮೊದಲ ಸಚಿವ ಸಂಪುಟದಲ್ಲಿ ಖ್ಯಾತ ಪತ್ರಕರ್ತ ರಂಗರಾವ್ ದಿವಾಕರ್ ಸಹಿತ ಒಬ್ಬರು ಆಗಿದ್ದರು. ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿದ್ದ ಪಾಟೀಲ್ ಪುಟ್ಟಪ್ಪನವರು ಸಹ ವಿಶ್ವವಾಣಿ ದಿನಪತ್ರಿಕೆ ಹಾಗೂ ಪ್ರಪಂಚ ಎನ್ನುವ ವಾರ ಪತ್ರಿಕೆಗಳ ಸಂಪಾದಕರಾಗಿದ್ದರು ಎಂದು ಹೇಳಿದರು.