ಸುದ್ದಿಒನ್, ವಿಜಯನಗರ, ಆಗಸ್ಟ್. 11 :
ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಕೊಚ್ಚಿ ಹೋದ ಘಟನೆಯಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಅಧಿಕಾರಿಗಳು ತುರ್ತು ಸಭೆ ನಡೆಸಿ ಅಣೆಕಟ್ಟಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಲು ತಜ್ಞರ ತಂಡವನ್ನು ಕಳುಹಿಸಿದ್ದಾರೆ. ತಜ್ಞರ ತಂಡ ಅಣೆಕಟ್ಟೆಗೆ ಆಗಮಿಸಿ ಗೇಟ್ ಕೊಚ್ಚಿಹೋಗಲು ಕಾರಣವೇನು ಎಂದು ಪರಿಶೀಲಿಸಿದ್ದಾರೆ. ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ತಡೆಯಬಹುದೇ ಅಥವಾ ಇಲ್ಲವೇ ಎಂಬ ಕುರ೬ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಸರಕಾರಕ್ಕೆ ಈ ಕುರಿತು ವರದಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಪ್ರವಾಹಕ್ಕೂ ಮುನ್ನ ಗೇಟ್‌ಗಳನ್ನು ಪರಿಶೀಲಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಟ್ ಗಳ ಮೇಲೆ ಒತ್ತಡ ಹೆಚ್ಚಾದ ಕಾರಣ ಗೇಟ್ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಅಣೆಕಟ್ಟಿನ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದಷ್ಟು ಬೇಗ ಗೇಟ್ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತುಂಗಭದ್ರಾ ಅಣೆಕಟ್ಟು ಪೂರ್ಣ ಸಾಮರ್ಥ್ಯ 105 ಟಟಿಎಂಸಿ. ಒಂದು ಅಂದಾಜಿನ ಪ್ರಕಾರ ಗೇಟ್ ದುರಸ್ತಿ ಕಾರ್ಯ ಮಾಡಲು 65 ರಿಂದ 70 ಟಿಎಂಸಿ ನೀರು ಖಾಲಿ ಮಾಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. 32 ಗೇಟ್‌ಗಳಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. 19ನೇ ಕ್ರಸ್ಟ್‌ಗೇಟ್‌ನ ದುರಸ್ತಿ ಕಾರ್ಯ ಸ್ಪಿಲ್‌ವೇಗಿಂತ ಕೆಳಕ್ಕೆ ಇಳಿದರೆ ಮಾತ್ರ ಸಾಧ್ಯ ಎನ್ನಲಾಗುತ್ತಿದೆ.
ಅದಕ್ಕಾಗಿಯೇ ಅಣೆಕಟ್ಟೆಯಲ್ಲಿನ ನೀರಿನ ಮಟ್ಟವನ್ನು 20 ಅಡಿಗಳಿಗೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ತುಂಗಭದ್ರಾ ಅಣೆಕಟ್ಟಿನ 69 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಅವಘಡ. ಇಷ್ಟು ದೊಡ್ಡ ಯೋಜನೆಗೆ ಯಾವುದೇ ಸ್ಟಾಪ್ ಲಾಕ್ ಹಾಕದಿರುವುದು ತಜ್ಞರಲ್ಲಿ ಅಚ್ಚರಿ ಮೂಡಿಸಿದೆ. ಲಂಬ ದ್ವಾರಗಳಿಂದ ನೀರು ನಿಲ್ಲುವುದು ಕಷ್ಟವಾಗಿದೆ ಎನ್ನಲಾಗಿದೆ. ಗೇಟ್ ದುರಸ್ತಿ ಮಾಡಿ ಸ್ಟಾಪ್ ಲಾಕ್‌ಗಳನ್ನು ಅಳವಡಿಸಬೇಕಾದರೆ, ಅದು ಕನಿಷ್ಠ ಒಂದು ವಾರ ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.