ತುಮಕೂರು : ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ದೇಶದಲ್ಲಿಯೇ ಏಳನೇ ಹಾಗೂ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ಸ್ಮಾರ್ಟ್ ಸಿಟಿ ಮಿಷನ್ ನ 7ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಗರದ ಆಲದಮರದ ಪಾರ್ಕ್‌ನಲ್ಲಿ ಸ್ಮಾರ್ಟ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಒಟ್ಟು 178 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು ಅದರಲ್ಲಿ 128ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರಲ್ಲದೇ ಇನ್ನೂ 50 ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಗಳ ಮೂಲಕ ನಗರದ ಚಿತ್ರಣವೇ ಬದಲಾಗಿದ್ದು, 800 ಕೋಟಿ.ರೂಗಳ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದರು. ಮಹಾತ್ಮಗಾಂಧೀ ಕ್ರೀಡಾಂಗಣ, ಪಾಲಿಕೆ ಕಟ್ಟಡ, ಎಂಪ್ರೆಸ್ ಆವರಣದಲ್ಲಿ ಆಡಿಟೋರಿಯಂ, ರಿಂಗ್ ರಸ್ತೆ ಅಭಿವೃದ್ಧಿ, ಮಾರಿಯಮ್ಮ ನಗರದಲ್ಲಿ ಪುನರ್ವಸತಿ, ಅಮಾನಿಕೆರೆಯ ಸಮಗ್ರ ಅಭಿವೃದ್ಧಿ , ತುಮಕೂರು ನಗರದ ನೀರಿನ ಬವಣೆಯನ್ನು ನೀಗಿಸುವುದರಲ್ಲಿ ಸ್ಮಾರ್ಟ್ ಸಿಟಿಯ ಕೊಡುಗೆ ಅಪಾರ ಎಂದರು.
ತುಮಕೂರಿನ 35 ವಾರ್ಡುಗಳ ಸುಮಾರು 60ಕ್ಕೂ ಹೆಚ್ಚು ಪಾರ್ಕುಗಳಿಗಾಗಿ 30 ಕೋಟಿಗೂ ಹಣವನ್ನು ವ್ಯಯಿಸಲಾಗಿದೆಯಲ್ಲದೇ ಜ್ಯೂನಿಯರ್ ಕಾಲೇಜಿನಲ್ಲಿ ನೂತನ ಕಟ್ಟಡಗಳಿಗೆ ಅನುದಾನವನ್ನು ಒದಗಿಸಲಾಗಿದೆ.ನಗರದ ಜನರ ಆರೋಗ್ಯ ರಕ್ಷಣೆಗಾಗಿ ಸ್ಮಾರ್ಟ್ ಸಿಟಿ ವತಿಯಿಂದ ಟ್ರಾಮಾ ಕೇರ್ ಸೆಂಟರ್, ವಿವಿಧ ಆರೋಗ್ಯ ಕೇಂದ್ರಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ನಗರದ ಹೃದಯ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗ್ರಂಥಾಲಯ, ಬಸ್ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರದ ಅಲ್ಲಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ವೆಂಡರ್ ಜೋನ್ , ಕಳ್ಳತನ ಸೇರಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಕಮಾಂಡ್ ಸೆಂಟರ್ಗಳನ್ನು ಸ್ಥಾಪಿಸಲಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದ ಅವರು ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಗರೀಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.