ಮಂಗಳವಾರದ Motivation : ಜೀವನದಲ್ಲಿ ಕಷ್ಟಗಳು ಸಾಮಾನ್ಯ. ಅವುಗಳನ್ನು ಮೆಟ್ಟಿ ನಿಲ್ಲುವವನು ಮಾತ್ರ ಗೆಲ್ಲುತ್ತಾನೆ. ಅಯ್ಯೋ ನನಗೇ ಯಾಕೆ ಹೀಗಾಗುತ್ತದೆ. ನನಗೆ ಇಷ್ಟೆಲ್ಲಾ ಸಮಸ್ಯೆಗಳಿವೆ ಎಂದು ಭಾವಿಸಿದರೆ, ನೀವು ಇದ್ದಲ್ಲಿಯೇ ಇರಬೇಕಾಗುತ್ತದೆ. ನೆರೆಹೊರೆಯವರು ನೋಡುನೋಡುತ್ತಿದ್ದಂತೆ ಎತ್ತರಕ್ಕೆ ಬೆಳೆಯುತ್ತಾರೆ.ನೀವು ಮಾತ್ರ ಇದ್ದಲ್ಲಿಯೇ ಇರಬೇಕಾಗುತ್ತದೆ.
ಮಾನವ ಜನ್ಮವು ಅಳುವುದರೊಂದಿಗೆ ಪ್ರಾರಂಭವಾಗುತ್ತದೆ. ಸಾವು ಕೂಡ ಅಳುವುದರಲ್ಲಿ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಕುಗ್ಗಿದರೆ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಮನುಷ್ಯನಾಗಿ ಹುಟ್ಟುವುದೇ ಕಷ್ಟ. ಅಂತಹುದರಲ್ಲಿ ಬದುಕಿನಲ್ಲಿ ಬರುವ ಸಣ್ಣ ಪುಟ್ಟ ನೋವುಗಳು, ಸಮಸ್ಯೆಗಳಿಗೆ ಹೆದರಿದರೆ ಹುಟ್ಟಿಗೆ ಮತ್ತು ಬದುಕಿಗೆ ಅರ್ಥವಿರುವುಲ್ಲ. ಕಷ್ಟಗಳಿಲ್ಲದ ಮನುಷ್ಯನಿಲ್ಲ. ನೀರಿಲ್ಲದೆ ಸಾಗರವಿಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೆ ಆತುರದ ನಿರ್ಧಾರ ತೆಗೆದುಕೊಳ್ಳುವವರು, ಆತ್ಮಹತ್ಯೆಯಂತಹ ಆಲೋಚನೆ ಮಾಡುವವರು ಚಿಕ್ಕ ಇರುವೆಯಿಂದ ಬಹಳಷ್ಟು ಕಲಿಯಬಹುದು. ಇರುವೆಗೆ ಆಹಾರ ಸಿಗಲು ತೊಂದರೆಯಾದರೆ ಅದು ಯಾರ ಸಹಾಯವನ್ನೂ ಕೇಳುವುದಿಲ್ಲ. ತನಗೆ ತಾನೇ ಸಹಾಯ ಮಾಡಿಕೊಳ್ಳುತ್ತದೆ. ಅದು ಏನೆಂದು ನೋಡೋಣ..
ನೀವು ಅನೇಕ ಬಾರಿ ಇರುವೆಗಳನ್ನು ಗಮನಿಸಿರುತ್ತೀರಿ. ಅದು ಆಹಾರವನ್ನು ತೆಗೆದುಕೊಂಡು ಹೋಗುವಾಗ ಒಂಟಿಯಾಗಿ ಹೋಗುತ್ತದೆ. ಇರುವೆ ತನ್ನ ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು ತೂಕದ ಆಹಾರವನ್ನು ಸಾಗಿಸಬಲ್ಲದು. ಅದರಂತೆ ಅದನ್ನು ಸಾಗಿಸುವಾಗ ಎಷ್ಟೇ ಅಡೆತಡೆಗಳು ಬಂದರೂ ಅದನ್ನು ತನ್ನ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಹೀಗೆ ಆಹಾರ ಸಾಗಿಸುವ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಸರಿಯಾಗಿ ಗಮನಿಸಿ ನೋಡಿದರೆ ಆಹಾರ ಸಾಗಿಸುವಾಗ ದಾರಿಯಲ್ಲಿ ಬಿರುಕು ಕಂಡರೆ ಇರುವೆ ನಿಲ್ಲುತ್ತದೆ. ನಂತರ ಅದು ತನ್ನಲ್ಲಿರುವ ಆಹಾರವನ್ನು ಬಿರುಕುಗಳ ಮೇಲೆ ತಳ್ಳಿ ಅದರ ಮೇಲಿಂದ ಮತ್ತೊಂದು ಬದಿಗೆ ಹೋಗಿ ಆ ಹಂತವನ್ನು ಯಶಸ್ವಿಯಾಗಿ ದಾಟುತ್ತದೆ. ಬಿರುಕಿನಂತಹ ಸಮಸ್ಯೆಗಳು ಬಂದವೆಂದು ತನ್ನ ಕೆಲಸವನ್ನು ಅಲ್ಲಿಗೇ ನಿಲ್ಲಿಸುವುದಿಲ್ಲ. ಪರ್ಯಾಯವಾಗಿ ತನ್ನ ಪ್ರಯತ್ನ ಮುಂದುವರೆಸಿ ಗುರಿ ಮುಟ್ಟುತ್ತದೆ.
ಛಲದಿಂದ ಮನುಷ್ಯ ಅನೇಕ ಮಹತ್ತರವಾದ ಕೆಲಸಗಳನ್ನು ಮಾಡಬಹುದು. ಕಷ್ಟಗಳಿಗೆ ಕುಗ್ಗದೇ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಿಕೊಂಡು ಗುರಿಯೆಡೆಗೆ ಸಾಗಬೇಕು. ಆತ್ಮಸ್ಥೈರ್ಯವಿದ್ದರೆ ಜೀವನದಲ್ಲಿ ಎಂತಹ ಅಡೆತಡೆಗಳನ್ನೂ ಸುಲಭವಾಗಿ ಜಯಿಸಬಹುದು. ಇರುವೆಯ ಬದುಕು ಕೂಡ ಮನುಷ್ಯನಿಗೆ ಪಾಠ ಕಲಿಸುತ್ತದೆ. ಕಷ್ಟಗಳು ಬಂದಾಗ ಕಣ್ಣೀರಿಡುತ್ತಾ ಕೂರುವುದಲ್ಲ ಅವುಗಳೊಂದಿಗೆ ಹೋರಾಡಬೇಕು ಈ ಮೂಲಕ ಅವುಗಳನ್ನು ದೂರ ಮಾಡಬೇಕು, ಯಶಸ್ಸಿಗೆ ಹತ್ತಿರವಾಗಬೇಕು. ಇಲ್ಲವಾದರೆ ಯಶಸ್ಸಿನಿಂದ ದೂರವೇ ಉಳಿಯಬೇಕಾಗುತ್ತದೆ. ಅದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇರಬೇಕು. ಈ ಸೃಷ್ಟಿಯಲ್ಲಿ ಹೋರಾಡದೆ ಯಾವ ಜೀವಿಯೂ ಬದುಕಲಾರದು ಎಂಬ ಸತ್ಯವನ್ನು ಅರಿತುಕೊಳ್ಳಬೇಕು.